ಓದಲೇಬೇಕಾದ ಪುಸ್ತಕ ದ ಆಲ್‌ಕೆಮಿಸ್ಟ್

ಓದಲೇಬೇಕಾದ ಪುಸ್ತಕಗಳ ಪೈಕಿ ಕನ್ನಡ ಪುಸ್ತಕಗಳೇ ಸಿಗುವುದಿಲ್ಲವೇ ಎಂಬುದು ನಿಮ್ಮ ಮೊದಲ ಪ್ರಶ್ನೆಯಾಗಿದ್ದಲ್ಲಿ, ಅದಕ್ಕೆ ಸುಮಾರು ನೂರಾರು ಕನ್ನಡ ಪುಸ್ತಕಗಳು ಓದಲೇಬೇಕಾದ ಪುಸ್ತಕಗಳ ಪಟ್ಟಿಯಲ್ಲಿವೆ. ಆದರೆ ನಾವು ಇಂದು ನಿಮ್ಮೊಂದಿಗೆ ಚರ್ಚಿಸಲು ಹೊರಟಿರುವ ಪುಸ್ತಕ ಬದುಕು ಬದಲಿಸುವ ಪುಸ್ತಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪುಸ್ತಕವನ್ನು. ನಿಮ್ಮಲ್ಲಿ ಬಹುತೇಕ ಮಂದಿ ಈಗಾಗಲೇ ಈ ಪುಸ್ತಕವನ್ನು ಓದಿರಬಹುದು. ಇನ್ನು ಕೆಲವರು ಓದಲೇ ಬೇಕು ಎಂದುಕೊಂಡಿರಬಹುದು.
Written by: Deepak M

ಓದಲೇಬೇಕಾದ ಪುಸ್ತಕಗಳ ಪೈಕಿ ಕನ್ನಡ ಪುಸ್ತಕಗಳೇ ಸಿಗುವುದಿಲ್ಲವೇ ಎಂಬುದು ನಿಮ್ಮ ಮೊದಲ ಪ್ರಶ್ನೆಯಾಗಿದ್ದಲ್ಲಿ, ಅದಕ್ಕೆ ಸುಮಾರು ನೂರಾರು ಕನ್ನಡ ಪುಸ್ತಕಗಳು ಓದಲೇಬೇಕಾದ ಪುಸ್ತಕಗಳ ಪಟ್ಟಿಯಲ್ಲಿವೆ. ಆದರೆ ನಾವು ಇಂದು ನಿಮ್ಮೊಂದಿಗೆ ಚರ್ಚಿಸಲು ಹೊರಟಿರುವ ಪುಸ್ತಕ ಬದುಕು ಬದಲಿಸುವ ಪುಸ್ತಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪುಸ್ತಕವನ್ನು. ನಿಮ್ಮಲ್ಲಿ ಬಹುತೇಕ ಮಂದಿ ಈಗಾಗಲೇ ಈ ಪುಸ್ತಕವನ್ನು ಓದಿರಬಹುದು. ಇನ್ನು ಕೆಲವರು ಓದಲೇ ಬೇಕು ಎಂದುಕೊಂಡಿರಬಹುದು. ಆದರೆ ಕೆಲವರಿಗೆ ಈ ಪುಸ್ತಕ ಒಂದು ಇದೆ ಎಂದು ಗೊತ್ತೋ? ಇಲ್ಲವೋ? ಅದಕ್ಕಾಗಿ ಈ ಲೇಖನವನ್ನು ಬರೆದಿದ್ದೇವೆ. ಈ ಪುಸ್ತಕವನ್ನು ಏಕೆ ಓದಬೇಕು ಎಂಬ ಪ್ರಶ್ನೆಗೆ ಉತ್ತರ ಈ ಲೇಖನ!

 

ಆಲ್‌ಕೆಮಿಸ್ಟ್ ಪುಸ್ತಕವನ್ನು ಏಕೆ ಓದಬೇಕು?

 

*ಕಥಾ ನಾಯಕನ ಪಾತ್ರದ ಜೊತೆಗೆ ನಿಮ್ಮನ್ನು ನೀವು ಗುರುತಿಸಿಕೊಳ್ಳಲು ಆರಂಭಿಸಿಬಿಡುತ್ತೀರಿ.

ಈ ಪುಸ್ತಕ ಇಷ್ಟು ಜನಪ್ರಿಯವಾಗಲು ಕಾರಣ ಪ್ರತಿಯೊಬ್ಬರ ಕಥಾನಾಯಕನ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಆರಂಭಿಸಿಬಿಡುತ್ತಾರೆ. ಸ್ಯಾಂಟಿಯಾಗೋ ಒಂದು ಪಾತ್ರವಾಗಿ ಆರಂಭವಾಗಿ ಛೇ ನಾವೇ ಅವನು, ಅವನೇ ನಾವು, ನಾವು ಹಾಗೆ ಆದರೆ ಹೇಗೆ ಎಂದು ಮುಂದುವರಿದುಬಿಡುತ್ತದೆ ಚಿಂತನೆ. ಅದೇ ಕತೆಯ ಶ್ರೇಷ್ಠತೆ ಓದುಗ ಅಂದರೆ ಸಹೃದಯ ಕತೆಯ ಪ್ರಧಾನ ಪಾತ್ರವನ್ನು ತನ್ನ ಹೃದಯದಿಂದ ಸ್ವೀಕರಿಸಬೇಕು.

 

*ನಮ್ಮ ದಾರಿ ನಮ್ಮದು

ಕಥಾ ನಾಯಕ ವೃತ್ತಿಯನ್ನು ಆರಿಸಿಕೊಳ್ಳುವ ಸಂದರ್ಭ ಬಂದಾಗ ಸ್ಯಾಂಟಿಯಾಗೋ ತಂದೆಯ ಆಸೆಯಂತೆ ಪಾದ್ರಿಯಾಗುವುದಿಲ್ಲ, ತಾನು ಕುರುಬನಾಗುತ್ತೇನೆ ಎಂದು ಆಸೆಯನ್ನು ವ್ಯಕ್ತಪಡಿಸ್ತುತ್ತಾನೆ. ತನ್ನಿಷ್ಟದ ದಾರಿಯನ್ನು ಆಯ್ದುಕೊಂಡ ಹುಡುಗ ಮುಂದೆ ಏನಾಗುತ್ತಾನೆ ಎಂಬುದನ್ನು ನೀವು ಓದಿಯೇ ತಿಳಿಯಿರಿ, ಆಗ ನೋಡಿ ಮಜಾ.

 

*ಕನಸುಗಳನ್ನು ಬೆನ್ನತ್ತಿ

ಕಾಸು ಇಲ್ಲದ ವ್ಯಕ್ತಿಗಳನ್ನು ಹುಡುಕಿದರೆ ಕೋಟಿಗಟ್ಟಲೆ ಸಿಕ್ಕುತ್ತಾರೆ ಈ ಜಗತ್ತಿನಲ್ಲಿ. ಆದರೆ ಕನಸುಗಳಿಲ್ಲದ ವ್ಯಕ್ತಿಯನ್ನು ಹುಡುಕುವುದು ಅಸಾಧ್ಯ. ಬುದ್ಧಿ ಸ್ಥೀಮಿತವಿರುವ ಎಲ್ಲಾ ವ್ಯಕ್ತಿಗಳು ಒಂದಲ್ಲ ಸಾವಿರಾರು ಕನಸುಗಳನ್ನು ಇರಿಸಿಕೊಂಡಿರುತ್ತಾರೆ. ಆದರೆ ಆ ಒಂದು ಕನಸು, ಆ ಒಂದು ಕನಸು ನಮ್ಮನ್ನು ಎಲ್ಲವನ್ನು ಬಿಟ್ಟು ನನ್ನನ್ನು ಬೆನ್ನತ್ತು ಎಂದು ಕರೆಯುತ್ತದೆ. ಹಾಗೆ ಕರೆದಾಗ ನಮ್ಮಲ್ಲಿ ಬಹುತೇಕ ಮಂದಿ ಆ ಕರೆಗೆ ಓಗೂಡುವುದಿಲ್ಲ. ಆದರೆ ಈ ಪುಸ್ತಕವನ್ನು ನೀವು ಓದಿದರೆ, ಅಂತಹ ಕರೆಗಳನ್ನು ನಿರಾಕರಿಸುವುದು ಅಸಾಧ್ಯ ಎಂದು ಹೇಳಬಹುದು. ಏಕೆಂದರೆ ಕನಸುಗಳನ್ನು ಬೆನ್ನತ್ತುವವರ ಭಗವದ್ಗೀತೆಯಂತೆ ಈ ಪುಸ್ತಕ ನಿಮ್ಮನ್ನು ಕನಸನ್ನು ಬೆನ್ನತ್ತಲು ತಿಳಿಸುತ್ತದೆ.

 

*ಜೀವನ ಸತ್ಯ

ಈ ಪುಸ್ತಕದಲ್ಲಿ ಬರುವ ಆಲ್ಕೆಮಿಸ್ಟ್ ಪಾತ್ರವು ಒಂದು ಮಾತು ಹೇಳುತ್ತದೆ “ವ್ಯಕ್ತಿಯೊಬ್ಬ ಏನನ್ನಾದರೂ ಆಳವಾಗಿ ಬಯಸಿದಾಗ ತನ್ನ ಕನಸನ್ನು ನನಸಾಗಿಸಲ್, ಆತನಿಗೆ ಇಡೀ ಬ್ರಹ್ಮಾಂಡವೇ ನೆರವಾಗಲು ಸಂಚು ಹೂಡುತ್ತದೆ”. ಈ ಮಾತಿನ ಅರ್ಥವನ್ನು ನೀವು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಈ ಪುಸ್ತಕವನ್ನು ತಪ್ಪದೆ ಓದಿ. ಆಗ ನೋಡಿ, ನಿಮ್ಮಲ್ಲಿರುವ ದೃಢ ನಿರ್ಧಾರವು ದುಪ್ಪಟ್ಟಾಗಿ ನೀವು ಬಯಸುವ ಕಾರ್ಯವನ್ನು ಮತ್ತಷ್ಟು ಉತ್ಸಾಹದಿಂದ ಮಾಡಲು ಮುನ್ನುಗ್ಗುತ್ತೀರಿ.

 

*ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡು

ಈ ಮಾತನ್ನು ಕೃಷ್ಣನಿಂದ ಹಿಡಿದು ಬಸವಣ್ಣನವರೆಗೆ ಸುಮಾರು ಜನ ಹೇಳಿದ್ದಾರೆ, ಈಗಲೂ ಹೇಳುತ್ತಾ ಇದ್ದಾರೆ. “ನಿಯತಿ” ಎಂದರೆ ಕೆಲಸ, ಕಾಯಕ, ಕನಸು ಎಂಬ ಅರ್ಥಗಳಿವೆ. ಯಾರು ತಮ್ಮ ನಿಯತಿಯನ್ನು ಕಂಡುಕೊಳ್ಳಲು ಸಫಲವಾಗುವರೋ ಅವರೇ ಜೀವನದಲ್ಲಿ ಏಳಿಗೆಯನ್ನು ಪಡೆಯುತ್ತಾರೆ. ಇದನ್ನು ಸೇಲಮ್‌ನ ರಾಜ ಹುಡುಗ ಸ್ಯಾಂಟಿಯಾಗೋಗೇ ವಿವರಿಸುವ ಮಾತುಗಳನ್ನು ನಾವು ಹೇಳುವುದಿಲ್ಲ ನೀವೇ ಓದಿ, ನಿಮ್ಮದೇ ಆದ ರೀತಿಯಲ್ಲಿ ತಿಳಿದುಕೊಳ್ಳಿ.

 

* ಇಷ್ಟಪಟ್ಟಿದ್ದಕ್ಕೆ ಅಂಟಿಕೊಂಡು ಕೂರಬೇಡಿ

ನಮ್ಮ ಇಷ್ಟಗಳು ಸಹ ಸೀಮಿತ ಅವಧಿಯನ್ನು ಹೊಂದಿರುತ್ತವೆ. ಅವುಗಳು ಕಾಲಕಾಲಕ್ಕೆ ಮಾರ್ಪಾಡಾಗುತ್ತಲೆ ಇರುತ್ತವೆ. ಕುರಿಕಾಯುವುದೇ ತನಗೆ ಇಷ್ಟ ಎಂದು ಹೋಗುವ ಕಥಾ ನಾಯಕ, ಕುರಿಗಳನ್ನೆಲ್ಲ ಮಾರಿ ಕನಸನ್ನು ಬೆನ್ನು ಹತ್ತುತ್ತಾನೆ. ಇದೇ ಮಾತನ್ನೇ ಅಲ್ಲವೇ ಕುವೆಂಪುರವರು ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು ಎಂದು ಹೇಳಿದ್ದು.

 

*ಇರುವುದನ್ನು ಕಳೆದುಕೊಂಡರೆ ಕೊರಗಬೇಡಿ

ತನ್ನೆಲ್ಲಾ ಕುರಿಗಳನ್ನು ಮಾರಿ ಹೊರಟ ನಾಯಕ ಆ ಹಣವನ್ನು ಹೇಗೆ ಕಳೆದುಕೊಂಡ, ಮತ್ತು ಅದರ ದುಪ್ಪಟ್ಟು ಹಣವನ್ನು ಹೇಗೆ ಸಂಪಾದಿಸಿದ ಎಂಬ ವೃತ್ತಾಂತವನ್ನು ಓದಿ ಸವಿಯಿರಿ. ಏನಾದರೂ ಕಳೆದುಕೊಂಡರೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಆಡುವವರಿಗೆ ಈ ಪುಸ್ತಕವನ್ನು ಓದಲು ನೀಡಿ. ಜೀವನ ಉತ್ಸಾಹವನ್ನು ನೀಡುವ ವೈದ್ಯನಂತೆ ಈ ಪುಸ್ತಕ ನೆರವಾಗುತ್ತದೆ.

 

* ನೀವು ಮಹತ್ಕಾರ್ಯವನ್ನು ಮಾಡಲು ಹೋದರೆ ಮಹಾಗುರುವೊಬ್ಬ ನಿಮಗಾಗಿ ಕಾಯುತ್ತಿರುತ್ತಾನೆ

ನಮ್ಮ ಕನಸುಗಳನ್ನು ನಾವು ಏಕಾಂಗಿಯಾಗಿ ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಮಾರ್ಗದರ್ಶಕರೊಬ್ಬರು ಬೇಕಾಗಿರುತ್ತಾರೆ. ಆದರೆ ನಾವು ಮಾಡಬೇಕಾದ ಕೆಲಸ ಕಾರ್ಯಗಳನ್ನು ನಾವು ಖಚಿತವಾಗಿ ಮಾಡಿ ಮುಗಿಸಿದಾಗ ಅಂದರೆ ಪ್ರಾಥಮಿಕ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದಾಗ, ಆ ಗುರು ಬಂದು ನಮ್ಮನ್ನು ಮುನ್ನಡೆಸುತ್ತಾನೆ. ಸ್ಯಾಂಟಿಯಾಗೋವನ್ನು ಮುನ್ನಡೆಸಿದ ಆ ಮಹಾಗುರು, ಆ ಗುರು ನಮ್ಮ ನಾಯಕನನ್ನು ಪರೀಕ್ಷಿಸಿದ ಬಗೆಗಳನ್ನು ಓದಿ ತಿಳಿಯಿರಿ.

 

*ಜೀವನವನ್ನು ಮುನ್ನಡೆಸುವುದು ಪ್ರಶ್ನೆಗಳು

ಕುರಿ ಕಾಯಲು ಹೋಗಲೇ? ಕನಸನ್ನು ಬೆನ್ನತ್ತಲೇ? ಎಂಬ ಎರಡು ಪ್ರಶ್ನೆಗಳು ಸ್ಯಾಂಟಿಯಾಗೋಗೆ ಎದುರಾಗುತ್ತವೆ. ಆಗ ಆತ ಕುರಿ ಕಾಯುವುದು ನನಗೆ ತಿಳಿದಿರುವ ವಿದ್ಯೆ, ಆದರೆ ಇಂದು ಬಿಟ್ಟರೆ ಕನಸನ್ನು ಬೆನ್ನತ್ತಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಕನಸನ್ನು ನನಸು ಮಾಡಿಕೊಳ್ಳುವ ಹಾದಿ ಹಿಡಿಯುತ್ತಾನೆ. ಬಹುತೇಕ ಮಂದಿ ಈ ಸಾಲನ್ನು ಅಕ್ಷರಶಃ ಅನುಸರಿಸಿ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

 

*ಯೋಗಿನಿಯ ಉಪದೇಶ

ಈ ಕಾದಂಬರಿಯಲ್ಲಿ ಯೋಗಿನಿಯ ಕತೆಯಲ್ಲಿ ಒಂದು ನೀತಿ ಬರುತ್ತದೆ. ಕೈಯಲ್ಲಿ ಒಂದು ಚಮಚೆಯನ್ನು ಹಿಡಿದು, ಅದರಲ್ಲಿ ಕೆಲವು ಹನಿ ಎಣ್ಣೆಯನ್ನು ಇರಿಸಿಕೊಂಡು ಇಡೀ ಭವನವನ್ನು ಸುತ್ತಿ ನೋಡುವ ಕೆಲಸ ಒಬ್ಬ ಯುವಕನಿಗೆ ನೀಡಲಾಗುತ್ತದೆ. ಎಣ್ಣೆಯನ್ನು ಸರಿಯಾಗಿ ನೋಡಿಕೋ ಎಂಬ ಮಾತಿಗೆ ಕಟ್ಟುಬಿದ್ದ ಯುವಕ ಭವನವನ್ನು ಸುತ್ತಿ ಬರುತ್ತಾನೆ. ಭವನದ ಕುರಿತು ಯೋಗಿನಿ ಕೇಳುವ ಪ್ರಶ್ನೆಗಳಿಗೆ ಆತನ ಬಳಿ ಉತ್ತರ ಏನೂ ಇರುವುದಿಲ್ಲ. ಮತ್ತೆ ಭವನವನ್ನು ಚೆನ್ನಾಗಿ ನೋಡಿಕೊಂಡು ಬಾ, ಆಗಲೇ ನಿನಗೆ ನನ್ನ ಮೇಲೆ ವಿಶ್ವಾಸ ಬರುವುದು ಎಂದು ಕಳುಹಿಸುತ್ತಾಳೆ ಯೋಗಿನಿ. ಈಗ ಆ ಯುವಕ ಭವನವನ್ನು ಸೂಕ್ಷ್ಮವಾಗಿ ನೋಡಿಕೊಂಡು ತಯಾರಾಗಿ ಬರುತ್ತಾನೆ. ಆದರೆ ಯೋಗಿನಿ ನಿನಗೆ ಕೊಟ್ಟ ಚಮಚದಲ್ಲಿದ್ದ ಎಣ್ಣೆಯೆಲ್ಲಿ? ಎಂದು ಕೇಳುತ್ತಾಳೆ. ಜೀವನವನ್ನು ಸಂಭ್ರಮಿಸಬೇಕು ಆದರೆ ಜವಾಬ್ದಾರಿಗಳನ್ನು ಮರೆಯಬಾರದು ಎಂದು ಹೇಳುವ ಈ ಉಪ ಕತೆಯು ಬಹುತೇಕ ಓದುಗರ ಜೀವನದ ಆದರ್ಶವಾಗಿ ಇಂದಿಗೂ ನೆಲೆ ನಿಂತಿದೆ.

 

ಒಟ್ಟಾರೆಯಾಗಿ ನಾವು ಹೇಳುವುದು ಇಷ್ಟೇ.

ಪುಟ ಪುಟಕ್ಕೂ ನಿಮಗೆ ಕುತೂಹಲ ಕೆರಳಿಸುತ್ತಾ ಸಾಗುವ, ನಿಮ್ಮ ಜೀವನವನ್ನು ನಿಮಗೆ ಬೇರೆ ರೀತಿಯಲ್ಲಿ ತೆರೆದಿಡುವ, ನಿಮ್ಮ ಬದುಕಿನ ಬಹುತೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಅಥವಾ ಉತ್ತರವನ್ನು ಕಂಡುಕೊಳ್ಳುವಂತೆ ಮಾಡುವ, ಮುಖ್ಯವಾಗಿ ನಿಮಗೆ ಕನಸುಗಳನ್ನು ಬೆನ್ನತ್ತುವ ಕಲೆಯನ್ನು ತಿಳಿಸಿಕೊಟ್ಟು, ಪ್ರೋತ್ಸಾಹಿಸುವ ಪುಸ್ತಕ ಓದಬೇಕೆಂದುಕೊಂಡರೆ ತಪ್ಪದೆ ಕನ್ನಡದಲ್ಲಿ “ದ ಆಲ್‌ಕೆಮಿಸ್ಟ್’ ಪುಸ್ತಕವನ್ನು ಓದಿ. ಇದರ ಲೇಖಕರು ಪಾಲೋ ಕೊಯೆಲ್ಹೋ ಆತನಿಗೆ ಧನ್ಯವಾದ ಹೇಳಲು ಮರೆಯದಿರಿ.

——————————————————————————————————————————-

Disclaimer : The opinions expressed here belong solely to the author(s) and are not to be taken as the stated position(s) of Magnon or its subsidiaries.

    Leave a Reply

    Your email address will not be published. Required fields are marked *