ಕೆ.ಜಿ.ಎಫ್ ಎಂಬ ಚಿನ್ನದಂತ ಚಿತ್ರ ಕಲಿಸಿದ ಬದುಕಿನ ಪಾಠಗಳು

Written by: Deepak M

ಡಿಸೆಂಬರ್ 21, 2018 ರಂದು ಬಿಡುಗಡೆಯಾಗಿ ಜಗತ್ತನ್ನೇ ಗೆದ್ದ ಕನ್ನಡ ಚಲನಚಿತ್ರ ಕೆ.ಜಿ.ಎಫ್. ಈಗ ಎಲ್ಲರ ಬಾಯಲ್ಲಿಯೂ ಒಂದೇ ಮಾತು ಅದು ಕೆ.ಜಿ.ಎಫ್ ಮತ್ತು ಅದರ ಗಳಿಕೆ. ಈ ಅಂಕಣ ಪ್ರಕಟವಾಗುವ ಹೊತ್ತಿಗೆ ಈ ಚಿತ್ರ ಇನ್ನೂರು ಕೋಟಿಯ ಗಡಿಯನ್ನು ದಾಟಿ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತ ಸಾಗುತ್ತಿದೆ. ನಾವು ಇಲ್ಲಿ ಆ ಚಿತ್ರದ ವಿಮರ್ಶೆ ಬರೆಯಲು ಬಂದಿಲ್ಲ. ಬದಲಿಗೆ ಆ ಚಿತ್ರವನ್ನು ನೋಡಿ ಆತ್ಮ ವಿಮರ್ಶೆ ಮಾಡಿಕೊಳ್ಳಲು ಬಂದಿದ್ದೇವೆ. ಬನ್ನಿ ಪ್ರತಿಯೊಬ್ಬ ಸಾಧಕರು ಕೆ.ಜಿ.ಎಫ್ ಚಿತ್ರದಿಂದ ಏನು ಕಲಿಯಬೇಕು ಎಂಬುದನ್ನು ಇಲ್ಲಿ ಚರ್ಚಿಸೋಣ.

1. ಜಗತ್ತನ್ನೆ ಗೆಲ್ಲಲು ಬೇಕು ನಾಲ್ಕು ವರ್ಷ

ನಾವು ಎಲ್ಲರೂ ಒಂದಲ್ಲ ಒಂದು ದಿನ ಗೆಲ್ಲಬೇಕು ಎಂದುಕೊಳ್ಳುತ್ತೇವೆ. ಆದರೆ ಜಗತ್ತನ್ನೇ ಗೆಲ್ಲಲು ಕನಿಷ್ಠ ನಾಲ್ಕು ವರ್ಷಗಳ ಶ್ರಮ ಬೇಕಾಗುತ್ತದೆ. 2015 ರಿಂದ 2018 ರವರೆಗೆ ಪ್ರಶಾಂತ್ ನೀಲ್ ಎಂಬ ದೂರದೃಷ್ಟಿಯ ನಿರ್ದೇಶಕ ಮತ್ತು ಹೊಂಬಾಳೆ ಫಿಲ್ಮ್ಸ್ ಎಂಬ ಸಹನಶೀಲ ಸಂಸ್ಥೆ ಈ ನಾಲ್ಕು ವರ್ಷ ಈ ಯಶಸ್ಸು ಪಡೆಯಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಿಶ್ವಕಪ್ ಪುಟ್ಬಾಲ್ ಮತ್ತು ಕ್ರಿಕೆಟ್ ಹಾಗೂ ಒಲಂಪಿಕ್ ಏಕೆ ನಾಲ್ಕು ವರ್ಷಕ್ಕೊಮ್ಮೆ ಬರುತ್ತದೆ ಎಂದು ನನಗೆ ಈ ಸಿನಿಮಾ ನೋಡಿ ಹೊರಬಂದ ಮೇಲೆ ತಿಳಿಯಿತು. ಏಕೆಂದರೆ ನಾಲ್ಕು ವರ್ಷ ಶ್ರಮಪಟ್ಟರೆ ಚಿನ್ನದ ಪದಕ ಪಡೆಯಬಹುದು. ನಿಮ್ಮ ಗುರಿಗಳು ದೊಡ್ಡದಿರಲಿ, ಅದನ್ನು ಸಾಧಿಸಲು ನಾಲ್ಕು ವರ್ಷದ ಡೆಡ್‌ಲೈನ್ ಹಾಕಿಕೊಂಡು, ನಾಲ್ಕು ವರ್ಷ ನಿರಂತರ ಶ್ರಮಪಡಿ. ಅದನ್ನು ಹೇಗೆ ಸಾಧಿಸಬಹುದು ಎಂಬುದನ್ನು ನೀವೇ ನಮಗೆ ತಿಳಿಸುತ್ತೀರಿ.

ಸಣ್ಣ ಸಣ್ಣ ಗೆಲುವುಗಳು ನೂರೆಂಟು ಇರಬಹುದು. ಆದರೆ ದೊಡ್ಡ ಗೆಲುವು ಒಂದು ಬೇಕು ಎಂದರೆ ಕನಿಷ್ಠ ನಾಲ್ಕು ವರ್ಷ ಶ್ರಮಪಡಬೇಕು ಎಂಬುದನ್ನು ಮರೆಯಬೇಡಿ.

2. ತಾಳ್ಮೆ ಮತ್ತು ಪ್ರಯತ್ನ ಸದಾ ನಿಮ್ಮೊಂದಿಗಿರಲಿ

ತಾಳ್ಮೆ ಮತ್ತು ಪ್ರಯತ್ನ ಎಂಬುದು ಯಶಸ್ಸು ಎಂಬ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಾಳ್ಮೆ ಮತ್ತು ನಿರಂತರ ಪ್ರಯತ್ನ ಎರಡರಲ್ಲಿ ಒಂದು ನಿಮ್ಮ ಬಳಿ ಇಲ್ಲವಾದರೆ, ನಿಮ್ಮ ಯಶಸ್ಸಿನ ನಾಣ್ಯಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಕೆ.ಜಿ.ಎಫ್ ಚಿತ್ರ ಕತೆ ಇನ್ನೂ ಬರೆಯುತ್ತಲೇ ಇದ್ದಾರೆ ಪ್ರಶಾಂತ್ ನೀಲ್!!! ಚಾಪ್ಟರ್-1 ಬಿಡುಗಡೆಯಾಗಿ ಯಶಸ್ವಿಯಾದ ಮೇಲೂ ಅವರು ಇನ್ನೂ ಬರೆಯುತ್ತಲೇ ಇದ್ದಾರೆ. ಕೆ.ಜಿ.ಎಫ್‌ನಲ್ಲಿ ಬಿರುಗಾಳಿ ಮತ್ತು ಭಾರೀ ಮಳೆ ಬಂದು ಸೆಟ್‌ಗಳು ಬಿದ್ದು ಹೋದ ಮೇಲೂ ಕಲಾ ನಿರ್ದೇಶಕರ ತಂಡ ಮತ್ತೆ ಸೆಟ್‌ಗಳನ್ನು ಎತ್ತಿ ನಿಲ್ಲಿಸಿದ್ದಾರೆ ಮತ್ತು ಮರು ನಿರ್ಮಿಸಿದ್ದಾರೆ. ನಿರ್ಮಾಪಕ ವರ್ಷಾನುಗಟ್ಟಲೆ ಹಣದ ಹೊಳೆಯನ್ನೇ ಹರಿಸಿ ತಮ್ಮ ತಂಡವನ್ನು ಹುರಿದುಂಬಿಸಿದ್ದಾರೆ. ತಾಳ್ಮೆ ಮತ್ತು ಪ್ರಯತ್ನಗಳ ಫಲವನ್ನು ಇಂದು ಇಡೀ ಕನ್ನಡ ಚಿತ್ರರಂಗಕ್ಕೆ ಬಳುವಳಿಯಾಗಿ ನೀಡಿದೆ ಈ ತಂಡ.

  1. ಬದ್ಧತೆ

ಬದ್ಧತೆ ಅಥವಾ ಕಮಿಟ್‌ಮೆಂಟ್ ಇಲ್ಲದಿದ್ದರೆ ನೀವು ಗೆಲ್ಲಲು ಆಗುವುದಿಲ್ಲ. ಕೆ.ಜಿ.ಎಫ್ ಚಿತ್ರ ಮಾಡುವಾಗ ಯಶ್ ಇನ್ನೊಂದು ಚಿತ್ರದಲ್ಲಿ ನಟಿಸಲು ಹೋಗಲಿಲ್ಲ. ಸಂಪೂರ್ಣವಾಗಿ ಈ ಚಿತ್ರಕ್ಕೆ ಮೀಸಲಾಗಿ ತಮ್ಮ ಬದ್ಧತೆಯನ್ನು ಮೆರೆದರು. ಚಿತ್ರದ ಖಳನಟರು ಬಹುತೇಕ ಜನ ಗಡ್ಡ, ಮೀಸೆ ಮತ್ತು ಕೂದಲುಗಳನ್ನು ತೆಗೆಯದೆ ಆ ಪಾತ್ರಕ್ಕೆ ತಮ್ಮ ಬದ್ಧತೆಯನ್ನು ಮೆರೆದರು. ನಮ್ಮ ಗೆಲುವಿನ ಪ್ರಮಾಣ ನಿರ್ಧಾರವಾಗುವುದು ನಾವು ತೋರಿಸುವ ಬದ್ಧತೆಯ ಆಧಾರದ ಮೇಲೆ ಎಂಬುದನ್ನು ಮರೆಯಬೇಡಿ.

  1. ನಂಬಿಕೆ

ಯಶ್ ಒಂದು ಸಂದರ್ಶನದಲ್ಲಿ ಹೇಳಿದ್ದರು. “ಕೆ.ಜಿ.ಎಫ್ ಕತೆಯನ್ನು ಮೊದಲು ಕೇಳಿದಾಗ ನಾನು ನಕ್ಕುಬಿಟ್ಟೆ” ಎಂದು. “ಉಗ್ರಂ ಸಿನಿಮಾ ಮಾಡಿದ ನಿರ್ದೇಶಕ ಇವರೇನಾ? ಎಂದು ನನಗೆ ಸಂಶಯ ಬಂದುಬಿಟ್ಟಿತು. ಆದರು ಸರಿ ಎಂದು ಇವರನ್ನು ನಂಬಿ, ಕೆ.ಜಿ.ಎಫ್ ಒಪ್ಪಿಕೊಂಡು ಇವರಿಗೆ ಡೇಟ್ಸ್ ಕೊಟ್ಟೆ. ಆದರೆ ಇವರ ಜೊತೆಗೆ ಕೆಲಸ ಮಾಡಿದಾಗ ಗೊತ್ತಾಗಿದ್ದೇನೆಂದರೆ, ಅವರು ಹೇಳಿದ್ದಕ್ಕೂ ಮಾಡುತ್ತಿದ್ದುದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು. ಏಕೆಂದರೆ ಯಶ್ ಪ್ರಶಾಂತ್‌ರನ್ನು ನಂಬಿ ಕೆಲಸ ಮಾಡಲು ಬಂದಿದ್ದರು. ಅವರನ್ನು ನಂಬಿ ನಿರ್ಮಾಪಕರು ಕೋಟಿಗಳು ಸುರಿಯಲು ಬಂದಿದ್ದರು. ಅವರನ್ನು ನಂಬಿ ನೂರಾರು ಜನರು ಪ್ರತಿದಿನ ಅವರ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ನಂಬಿಕೆಯೇ ಅವರಲ್ಲಿರುವ ಅತ್ಯುತ್ತಮವಾದುದನ್ನು ತೆರೆಯ ಮೇಲೆ ತರಲು ಸಹಕರಿಸಿದ್ದು. ಗೆಲ್ಲಲು ಹೋಗುವವರು ಮೊದಲು ನಂಬಬೇಕು. ನಂಬಿಕೆ ಇದ್ದರೆ ಮಾತ್ರವೇ ಗೆಲುವಿನ ರುಚಿಯ ಸಾರ್ಥಕತೆಯನ್ನು

5. ನಾಯಕತ್ವ

ಕೆ.ಜಿ.ಎಫ್ ಚಿತ್ರಕ್ಕೆ ತೆರೆಯ ಮೇಲೆ ಯಶ್ ನಾಯಕನಿರಬಹುದು. ಆದರೆ ತೆರೆಯ ಹಿಂದೆ ಬಹುತೇಕ ಜನ ನಾಯಕರಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರು, ಛಾಯಗ್ರಹಣ ಮಾಡಿದ ಭುವನ್ ಗೌಡ, ಕಲಾ ನಿರ್ದೇಶಕ ಶಿವ ಕುಮಾರ್, ವಸ್ತ್ರ ವಿನ್ಯಾಸಕಾರರರಾದ ಯೋಗಿ ಚಿರಾಜ್ -ಸಾನ್ಯಾ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಇವರೆಲ್ಲರೂ ತಮ್ಮ ತಮ್ಮ ವಿಭಾಗದಲ್ಲಿ ಕೂಲಿ ಆಳುಗಳಂತೆ ದುಡಿಯದೆ ನಾಯಕರಂತೆ ದುಡಿದಿದ್ದಕ್ಕೆ ಇಂದು ಜನ ಕೆ.ಜಿ.ಎಫ್ ಬಗ್ಗೆ ಮಾತನಾಡುತ್ತಿರುವುದು ಮತ್ತು ನಾವು ಬರೆಯುತ್ತಿರುವುದು. ಅದಕ್ಕೇ ರಾಬಿನ್ ಶರ್ಮಾ ಹೇಳುವುದು “ನಾಯಕತ್ವ ಎಂಬುದು ಒಂದು ಹುದ್ದೆಯಲ್ಲ, ಅದು ಒಂದು ಸ್ವಭಾವ” ಎಂದು. ಅದನ್ನು ನಾವು ಸ್ವಾಭಾವಿಕವಾಗಿ ವ್ಯಕ್ತಪಡಿಸಿದಾಗ ಗೆಲುವು ನಮ್ಮ ಮುಂದೆ ಮಂಡಿಯೂರಿ ಕುಳಿತುಕೊಳ್ಳುತ್ತದೆ.

  1. ಕನಸು ಎಷ್ಟು ದೊಡ್ಡದಾಗಿರಬೇಕು ಎಂದರೆ, ಅದಕ್ಕೆ ನಾವೇ ಹೆದರುವಂತಿರಬೇಕು

ನಿಜ, ಕೆ.ಜಿ.ಎಫ್ ಎಂತಹ ದೊಡ್ಡ ಕನಸೆಂದರೆ, ಅದಕ್ಕೆ ನಾಲ್ಕಕ್ಕೂ ಹೆಚ್ಚಿನ ವರ್ಷ ಶ್ರಮ, ಸಾವಿರಾರು ಜನರ ಶ್ರಮ, ಕೋಟಿಗಟ್ಟಲೆ ಹಣ, ಯಶ್, ರಾಜಮೌಳಿ, ಶೋಭು ಯರ್ಲಗಡ್ಡ, ಅನಿಲ್ ತಡಾನಿ, ಫರ್ಹಾನ್ ಖಾನ್ ಮುಂತಾದ ಘಟಾನುಘಟಿಗಳ ಸಮ್ಮಿಲನ ಎಲ್ಲವೂ ಬೇಕಾಯಿತು. ನಮ್ಮ ಕನಸು ನಮ್ಮನ್ನು ಹೆದರಿಸಲಿಲ್ಲವೆಂದರೆ ನಿಜಕ್ಕೂ ಆ ಕನಸನ್ನು ದೊಡ್ಡ ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಅಂತಹ ದೊಡ್ಡ ಕನಸನ್ನು ನಾವು ಕಾಣಬೇಕು ಮತ್ತು ಆ ಕನಸಿಗಾಗಿ ವರ್ಷಾನುಗಟ್ಟಲೇ ಜೀವಿಸಿದ ಮೇಲೆ ಗೆಲುವು ಬರುತ್ತದಲ್ಲ! ಬಂದ ಸ್ವಲ್ಪ ದಿನಕ್ಕೆ ನಮ್ಮ ನನಸಾದ ಕನಸನ್ನು ನೋಡಿ ನಾವು ಹೆದರುತ್ತೇವೆಯಲ್ಲಾ? ಅದು,,,,!!! ಜೀವನದ ಸಾರ್ಥಕ ಕ್ಷಣ. ಪ್ರಶಾಂತ್ ನೀಲ್ ಮತ್ತು ಯಶ್ ಬಳಿ ಹೋಗಿ ಕೇಳಿ ಅವರ ಕನಸು ಮತ್ತು ಅವರಿಗೆ ಈಗ ಆಗುತ್ತಿರುವ ಹೆದರಿಕೆಯನ್ನು ವಿವರಿಸುತ್ತಾರೆ. ಹೆದರುವುದು ಮೂರನೆಯ ಹಂತ, ಕನಸನ್ನು ದೊಡ್ಡ ಮಟ್ಟದಲ್ಲಿ ಕಾಣಿ, ಅದೇ ಮೊದಲನೆ ಹಂತ.

  1. ಗೆಲುವನ್ನು ಸಹ ಸುಧಾರಿಸಿಕೊಳ್ಳಬೇಕು.

ಎಲ್ಲರೂ ಸೋತಾಗ ಸುಸ್ತಾಗಿ ಸುಧಾರಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ನಾವು ಗೆದ್ದಾಗ ಸಹ ಸುಧಾರಿಸಿಕೊಳ್ಳಬೇಕಾಗುತ್ತದೆ. ಸುಧಾರಿಸಿಕೊಳ್ಳಲೇ ಬೇಕಾದ ಗೆಲುವನ್ನು ಕೆ.ಜಿ.ಎಫ್ ತಂದುಕೊಟ್ಟಿದೆ. ಇದು ಎಂತಹ ಗೆಲುವು ಎಂದರೆ ಇಡೀ ಕನ್ನಡ ಚಿತ್ರರಂಗವೇ ಸುಧಾರಿಸಿಕೊಳ್ಳಬೇಕು ಅಂತಹ ಗೆಲುವು. ಗೆಲುವು ಬಂದಾಗ ಸುಧಾರಿಸಿಕೊಂಡು ಮುನ್ನಡೆಯಬೇಕು. ಕೆ.ಜಿ.ಎಫ್ ಚಾಪ್ಟರ್ 1 ನ ಗೆಲುವನ್ನು ಮೀರಿಸಲು ಈ ಚಿತ್ರ ತಂಡ ಇದರ ಎರಡರಷ್ಟು ದೊಡ್ಡ ಗೆಲುವನ್ನು ಪಡೆಯಬೇಕು ಎಂದರೆ ಎಷ್ಟು ಸುಧಾರಿಸಿಕೊಳ್ಳಬೇಕು ಎಂದು ನೀವೇ ಊಹಿಸಿ. ಇಂತಹ ಗೆಲುವಿನ ಓಟವನ್ನು ಮುಂದುವರೆಸಿಕೊಂಡು ಹೋಗಲು ಕನ್ನಡ ಚಿತ್ರರಂಗ ಸಿದ್ಧವಾಗಿದೆಯೇ? ಅದಕ್ಕೆ ಹೇಳಿದ್ದು, ಸುಧಾರಿಸಿಕೊಳ್ಳಬೇಕು. ಸಂಭ್ರಮ ಸಾಕು. ಸುಧಾರಿಸಿಕೊಂಡು, ನಾಲ್ಕು + ನಾಲ್ಕು ವರ್ಷಗಳ ಶ್ರಮವನ್ನು ತೂಗುವಂತಹ ಸಾಧನೆಯನ್ನು ಮಾಡಿ ಯಶಸ್ಸನ್ನು ಪಡೆಯಿರಿ ಯಶ್ + ಪ್ರಶಾಂತ್ ನೀಲ್ + ಕೆ.ಜಿ.ಎಫ್ ತಂಡ ಎಂದು ಕೇಳಿಕೊಳ್ಳುತ್ತೇವೆ.

  1. ಗೆಲುವಿಗೆ ಸಿದ್ಧಸೂತ್ರಗಳಿರುವುದಿಲ್ಲ, ನಾವೇ ಒಂದನ್ನು ಸಿದ್ಧಪಡಿಸಬೇಕು

ಕೆ.ಜಿ.ಎಫ್‌ನಲ್ಲಿ ಕಾಮೆಡಿ, ಪ್ರೇಮ, ಇತ್ಯಾದಿಗಳು ಇದ್ದೂ ಇಲ್ಲದಂತಿವೆ. ತಮನ್ನಾ ಐಟಂ ಹಾಡು ಇದ್ದರೂ ಜನ ಅದರ ಬಗ್ಗೆ ಒಂದೂ ಮಾತು ಆಡುವುದಿಲ್ಲ, ಇದ್ದರೂ ನಡೆಯುತ್ತಿತ್ತು ಮತ್ತು ಇಲ್ಲದಿದ್ದರೂ ಪರವಾಗಿಲ್ಲ ಎಂಬಂತಿದೆ ಕತೆ. ಅಶ್ಲೀಲತೆ ಮತ್ತು ಡಬಲ್ ಮೀನಿಂಗ್ ಡೈಲಾಗ್ ಇಲ್ಲವೇ ಇಲ್ಲ. ಅಸಲಿಗೆ ಕತೆ ಅಂತ್ಯವೇ ಆಗಿಲ್ಲ. ಬಾಹುಬಲಿ ತಂಡದಂತೆ ತಲೆಗೆ ಹುಳ ಬಿಟ್ಟಿಲ್ಲ. ಆದರೂ ಚಿತ್ರದ ಓಟ ಇನ್ನೂ ನಿಂತಿಲ್ಲ. ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಬಿಡಿ. ಅದು ಓಡಲಿ, ಸಿದ್ಧಸೂತ್ರಗಳ ಸಿನಿಮಾ ಮಾಡಿದ್ದಕ್ಕಿಂತ ಹತ್ತರಷ್ಟು ಲಾಭ ಬರಲು ಒಂದೇ ಕಾರಣ. ಈ ಚಿತ್ರಕ್ಕೆ ತನ್ನದೇ ಆದ ಸೂತ್ರಗಳಿದ್ದವು. ಆ ಸೂತ್ರವನ್ನು ಪರಿಣಾಮಕಾರಿಯಾಗಿ ತೆರೆಗೆ ತಂದರು ಗೆದ್ದರು. ಇಲ್ಲವಾದರೆ ಕ್ಲೈಮ್ಯಾಕ್ಸ್‌ನಲ್ಲಿ ಸೆಂಟಿಮೆಂಟ್ ಫ್ಲಾಶ್‌ಬ್ಯಾಕ್ ತೋರಿಸುತ್ತಾ, ಕ್ಲೈಮ್ಯಾಕ್ಸ್‌ನ ವೇಗವನ್ನು ಚೂರು ಕಡಿಮೆಯಾಗದಂತೆ ನೋಡಿಕೊಳ್ಳುವುದು ಎಂದರೆ ಸಾಮಾನ್ಯದ ಮಾತೇ? ನಿಮ್ಮ ಸೂತ್ರವನ್ನು ನೀವೇ ರಚಿಸಿಕೊಳ್ಳಿ. ಸಾಧ್ಯವಾದರೆ ನಮಗೂ ತಿಳಿಸಿ.

  1. ಒಬ್ಬ ಮನುಷ್ಯ ಗೆಲ್ಲಬೇಕು ಎಂದರೆ ಮೊದಲು ಮನೆಯವರ ಬೆಂಬಲ ಬೇಕು

ಯಶ್ ಗೆಲುವಿಗೆ ಧನ್ಯವಾದ ಹೇಳುವಾಗ ಪ್ರಮುಖವಾಗಿ ಪ್ರಶಾಂತ್ ನೀಲ್ ಅವರ ಹೆಂಡತಿ ಮತ್ತು ತಾಯಿಗೆ ಧನ್ಯವಾದ ಹೇಳಿದರು. “ಪ್ರಶಾಂತ್ ಅವರನ್ನು ಅವರ ಪಾಡಿಗೆ ಅವರು ಕೆಲಸ ಮಾಡಿಕೊಳ್ಳಲು ಬಿಟ್ಟಿದ್ದಕ್ಕೆ!!!!”. ಏಕೆಂದರೆ ಯಶ್ ಚಿತ್ರೀಕರಣದಲ್ಲಿ ಇದ್ದದ್ದು ಸುಮಾರು 180 ದಿನ. ಆದರೆ ಪ್ರಶಾಂತ್ ನೀಲ್ ಇದ್ದದ್ದು ವರ್ಷಾನುಗಟ್ಟಲೆ!. ಸುಮಾರು ಜನ ಸಾಧಕರು ಸಂಸಾರದಲ್ಲಿ ಹೆಂಡತಿ, ಮಕ್ಕಳು, ತಂದೆ, ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇತ್ಯಾದಿ ಎಂದು ಮುಳುಗಿ ಹೋಗಿರುತ್ತಾರೆ. ಯಶಸ್ಸು ಎಂಬುದು ಅವರ ಹೊರಗೆ ಇರುತ್ತದೆ. ಇವರನ್ನು ಬಿಟ್ಟು ಶಾಶ್ವತವಾಗಿ ದೂರ ಹೋಗಿ ಎಂದು ನಾವು ಹೇಳುವುದಿಲ್ಲ. ಆದರೆ ಕೌಟುಂಬಿಕ ಜವಾಬ್ದಾರಿಯ ನಡುವೆ ಯಶಸ್ಸಿನ ಏಣಿ ಏರುವುದನ್ನು ಮರೆಯಬೇಡಿ ಎಂದು ಹೇಳುತ್ತೇವೆ. ಕುಟುಂಬ ಸದಸ್ಯರು ಸಹ ತಮ್ಮ ಮನೆಯ ಸಾಧಕನನ್ನು ಸಾಧನೆಯ ಹಾದಿಯಲ್ಲಿ ನಡೆಯಲು ಪ್ರೋತ್ಸಾಹಿಸಬೇಕೇ ಹೊರತು ಅಡ್ಡಗಾಲಾಗಿ ನಿಲ್ಲಬಾರದು.

10. ಮಾತಿಗಿಂತ ಕೃತಿ ಮೇಲು

“ಏನು ನಮ್ಮನ್ನು ಕಂಡರೆ ಉರ್ಕೊಳ್ಳವ್ರು ಒಬ್ರಾ, ಇಬ್ರಾ,,,,,” ಡೈಲಾಗ್ ಕೆ.ಜಿ.ಎಫ್‌ನಲ್ಲಿಲ್ಲ. ಆದರೂ ಇದು ಸೂಕ್ತವಾಗಿ ಇಲ್ಲಿಗೂ ಸಹ ಸಲ್ಲುತ್ತದೆ. ನೀವು ಗೆದ್ದಾಗ ಊರು ತುಂಬಾ ಶತ್ರುಗಳು ಉಚಿತವಾಗಿ ಸಿಕ್ಕುತ್ತಾರೆ. ತಲೆ ಕೆಡಿಸಿಕೊಳ್ಳಬೇಡಿ. ಸ್ವಂತ, ಬಂಧ, ಸಂಬಂಧ, ರಕ್ತ ಸಂಬಂಧ, ಸ್ನೇಹ ಎಲ್ಲಾವು ಯಶಸ್ಸು ಎನ್ನುವ ಸುನಾಮಿಯಲ್ಲಿ ಕೊಚ್ಚಿ ಹೋಗಬಹುದು. ಉಳಿದುಕೊಳ್ಳೋದು ನೀವು ಮತ್ತು ನಿಮ್ಮ ಕೆಲಸ ಮಾತ್ರ. ಗೆಲುವು ಗೆದ್ದ ಮೇಲೆ ಇತಿಹಾಸ, ಹಳೆಯ ಸರಕಾಗುತ್ತದೆ. ಅದೇ ನಿಮ್ಮ ಸವಾಲು, ಅದೇ ನಿಮ್ಮ ಮೊದಲ ಶತ್ರು ಅದನ್ನು ಮೀರಿಸುವಷ್ಟು ಕೆಲಸ ಮಾಡಿ, ಮತ್ತೆ ಗೆಲುವು ಸಿಕ್ಕೇ ಸಿಗುತ್ತದೆ. ಗೆದ್ದಾಗ ಬೀಗಬೇಡಿ. ಎಷ್ಟು ದೊಡ್ಡ ಗೆಲುವು ಬಂದಿರುತ್ತದೆಯೋ, ಅದನ್ನು ಮೈನಸ್ ಅಂಕಿಗಳಲ್ಲಿ ಇರಿಸಿ, ಸ್ಕ್ರ್ಯಾಚ್‌ನಿಂದ ಮತ್ತೆ ಕೆಲಸ ಶುರು ಮಾಡಿ. ಆಗ ಮಾತ್ರ ನೀವು ಯಶಸ್ಸಿನ ತುತ್ತ ತುದಿಯಲ್ಲಿ ನಿಲ್ಲಲು ಸಾಧ್ಯ.

ಆಲ್ ದಿ ಬೆಸ್ಟ್ ಕೆ.ಜಿ.ಎಫ್‌ ತಂಡ, ಚಾಪ್ಟರ್ 2 ನಲ್ಲಿ ಇದರ ಎರಡರಷ್ಟು ಗೆಲುವು ನಿಮ್ಮದಾಗಲಿ ಎಂದು ನಾವು ಬಿಲಿಯನ್ ವಾಯ್ಸ್ ಕಡೆಯಿಂದ ಹಾರೈಸುತ್ತೇವೆ.

ಚಿತ್ರ ಕೃಪೆ: ಹೊಂಬಾಳೆ ಫಿಲ್ಮ್ಸ್

    Leave a Reply

    Your email address will not be published.