ನಾವೇಕೇ ಒಂದು ಹೊಸ ಭಾಷೆಯನ್ನು ಕಲಿಯಬೇಕು

ಬಹುತೇಕ ಭಾರತೀಯರು ಕನಿಷ್ಠ ಎರಡು ಭಾಷೆಗಳನ್ನು ಓದಲು, ಬರಯಲು ಮತ್ತು ಮಾತನಾಡಲು ಕಲಿತಿರುತ್ತಾರೆ. ಇದಕ್ಕೆ ಇಲ್ಲಿನ ಶೈಕ್ಷಣಿಕ ನೀತಿಯು ಸಹ ಸಹಕಾರವನ್ನು ನೀಡುತ್ತದೆ ಎಂಬುದು ಇನ್ನೊಂದು ಗಮನಾರ್ಹ ವಿಚಾರ. ನಾವು ದೊಡ್ಡವರಾದೆಂತಲ್ಲಾ, ಈ ಭಾಷೆಗಳ ಮೇಲಿನ ನಮ್ಮ ಪ್ರಭುತ್ವ ಮತ್ತು ಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ನಮಗೆ ದೊರೆಯುವ ಪ್ರಯೋಜನಗಳ ಕುರಿತು ನಾವು ಅಷ್ಟಾಗಿ ಗಮನಹರಿಸಿಲ್ಲ. ಇದನ್ನು ನಿಜಕ್ಕೂ ತಿಳಿದುಕೊಂಡರೆ ನೀವು ಸಹ ಹೊಸ ಭಾಷೆಯೊಂದನ್ನು ಕಲಿತುಕೊಳ್ಳಲು ಇಂದೇ ಸಿದ್ಧರಾಗುವುದು ಖಂಡಿತ.
Written by: Raghunath J

Translated by: Deepak M

8ನೇ ಶತಮಾನದ ರೋಮನ್ ದೊರೆ ಚಾರ್ಲ್ಸ್ ದಿ ಗ್ರೇಟ್ ಹೀಗೆ ಹೇಳಿದ್ದಾರೆ “ಒಂದು ಭಾಷೆಯನ್ನು ಕಲಿತುಕೊಂಡರೆ, ಒಂದು ಹೊಸ ಆತ್ಮವನ್ನು ಆವಾಹಿಸಿಕೊಂಡಂತೆ”.ಈ ವ್ಯಾಖ್ಯಾನವು ಭಾಷೆಯನ್ನು ಕಲಿಯಲು ಇರುವ ಮಹತ್ವವನ್ನು ಸಾರುತ್ತದೆ. ಇಪ್ಪತ್ತೊಂದನೆ ಶತಮಾನದ ಖ್ಯಾತ ಲೇಖಕ, ಜೆಫ್ರಿ ವಿಲಿಯನ್ ಹೀಗೆ ಹೇಳಿದ್ದಾರೆ, “ನೀವು ಒಂದು ಹೊಸ ಭಾಷೆಯನ್ನು ಕಲಿಯುವವರೆಗೂ ನಿಮ್ಮ ಭಾಷೆಯ ಕುರಿತು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ” ಎಂದು. ಇಂದಿನ ಕಾಲ ಘಟ್ಟದಲ್ಲಿ ಅಧಿಕ ಭಾಷೆಯನ್ನು ಕಲಿಯುವುದರಿಂದ ನಿಮಗೆ ಇರುವ ಮಾರುಕಟ್ಟೆಯನ್ನು ನೀವು ವಿಸ್ತರಿಸಿಕೊಳ್ಳಬಹುದು. ಅತಿ ಹೆಚ್ಚು ಭಾಷೆಗಳನ್ನು ಕಲಿತವರಿಗೆ ಕಂಪನಿಗಳು ಮಣೆ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ.

ನ್ಯೂರಾಲಾಜಿಯ ಪ್ರಭಾವಗಳು

ಸಂಶೋಧಕರಾದ ಡಾ. ವಿಯೊರಿಕಾ ಮರಿಯನ್ ಮತ್ತು ಆಂಟೋನಿ ಶೂಕ್ ಅವರ ಅಧ್ಯಯನದ ಪ್ರಕಾರ ಹೊಸ ಭಾಷೆಯೊಂದನ್ನು ಕಲಿಯುವುದರಿಂದ ನಮ್ಮ ಏಕಾಗ್ರತೆ ಮತ್ತು ಕೆಲಸಗಳ ನಡುವೆ ಬದಲಾಯಿಸುವ ಗುಣವನ್ನು ಸುಧಾರಿಸಿಕೊಳ್ಳಬಹುದಂತೆ. ಇದು ಹೇಗೆ ಆಗುತ್ತದೆ ಎಂದರೆ, ನಾವು ಒಂದು ಭಾಷೆಯನ್ನು ಮಾತನಾಡುವಾಗ ನಮ್ಮದೇ ಮಾತೃ ಭಾಷೆಯಲ್ಲಿ ಆಲೋಚನೆ ಮಾಡುತ್ತೇವೆ. ಹೀಗೆ ನಾವು ಒಂದು ಭಾಷೆಯನ್ನು ಬಳಸುವಾಗ ಇನ್ನೊಂದು ಭಾಷೆಯನ್ನು ಸಹ ಪರೋಕ್ಷವಾಗಿ ಬಳಸುತ್ತೇವೆ. ಇದು ನಾವು ವಿವಿಧ ಕಾರ್ಯಗಳನ್ನು ಮಾಡುವಾಗ ಕೆಲಸಗಳ ನಡುವೆ ಬದಲಾಯಿಸಲು ಸಹಕರಿಸುತ್ತದೆ. ಹೊಸ ಭಾಷೆಯನ್ನು ಕಲಿಯುವುದರಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಆಲೋಚನೆ ಮಾಡುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಸಹ ಇದರಿಂದ ಸುಧಾರಿಸುತ್ತದೆ. ಹೊಸ ಭಾಷೆ ಕಲಿಯುವುದು ಎಂದರೆ, ಹೊಸ ಹೊಸ ಪದ ಮತ್ತು ವಾಕ್ಯ ಹಾಗೂ ವ್ಯಾಕರಣ ನಿಯಮಗಳನ್ನು ಕಲಿಯುವುದು ಎಂದರ್ಥ. ಹೀಗೆ ಹೊಸತು ಎಂಬುದು ನಿಮ್ಮ ನೆನಪಿನ ಶಕ್ತಿಯ ಮೇಲೆ ಸಹ ಪ್ರಭಾವ ಬೀರಿ, ಅದನ್ನು ಸದೃಢಗೊಳಿಸುತ್ತದೆ. ವಯಸ್ಸಾದ ಮೇಲೆ ಸ್ಮರಣೆ ಶಕ್ತಿ ಕಳೆದುಕೊಳ್ಳುವ ಸಮಸ್ಯೆಯನ್ನು ನೀವು ಹೆಚ್ಚು ಭಾಷೆಗಳನ್ನು ಕಲಿಯುವ ಮೂಲಕ ತಡೆಯಬಹುದು.


ಸಾಮಾಜಿಕ ಜೀವನ

ನೀವು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತರೆ ಸಮಾಜದಲ್ಲಿ ನಿಮಗೆ ಹೆಚ್ಚಿನ ಗೌರವ ದೊರೆಯುವುದರಲ್ಲಿ ಸಂಶಯವಿಲ್ಲ. ಪಕ್ಕದ ರಾಜ್ಯಕ್ಕೆ ಅಥವಾ ದೇಶಕ್ಕೆ ಹೋದಾಗ ನಿಮಗೆ ಆ ಸ್ಥಳದಲ್ಲಿನ ಭಾಷೆ ಬಂದಲ್ಲಿ, ಅದರಿಂದ ನಿಮಗೆ ಎಂತಹ ಉಪಯೋಗವಾಗುತ್ತದೆ ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು. ಭಾಷೆ ಜನರನ್ನು ಬೆಸೆಯುವ ಒಂದು ಸಾಧನ. ಹೆಚ್ಚು ಭಾಷೆಗಳನ್ನು ಮಾತನಾಡಲು ಬಂದಲ್ಲಿ, ನಿಮಗೆ ಹೆಚ್ಚು ಹೆಚ್ಚು ಜನರ ಜೊತೆಗೆ ಬೆರೆಯುವ ಅವಕಾಶ ದೊರೆಯುತ್ತದೆ. ಹೆಚ್ಚು ಹೆಚ್ಚು ಸಂಸ್ಕೃತಿ ಮತ್ತು ಸಾಹಿತ್ಯಗಳ ಕುರಿತು ಸಹ ನೀವು ತಿಳಿದುಕೊಳ್ಳಬಹುದು. ಆಪತ್ಕಾಲದಲ್ಲಿ ನಿಮ್ಮನ್ನು ನಿಮ್ಮ ಭಾಷಾಜ್ಞಾನವೇ ಕಾಪಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ಆಲೋಚನೆಗಳನ್ನು ಎದುರಿಗೆ ಇರುವವರಿಗೆ ತಿಳಿಸುವ ಸಾಮರ್ಥ್ಯ ಭಾಷೆ ತಾನೇ ನೀಡುತ್ತದೆ. ನಿಮ್ಮಿಂದ ಇತರರಿಗೆ ಸಹಾಯವಾಗುವುದಿದ್ದಲ್ಲಿ, ಅದಕ್ಕೆ ಪ್ರಮುಖ ಕಾರಣ ಸಹ ಭಾಷೆಯೇ ಆಗಿರುತ್ತದೆ. ಹೀಗೆ ಭಾಷೆಯು ಸಮಾಜದಲ್ಲಿ ನಿಮ್ಮನ್ನು ಗುರುತಿಸುವ ಒಂದು ಪ್ರಧಾನ ಅಂಶವಾಗಿ ಬಳಕೆಯಾಗುವುದರಲ್ಲಿ ಸಂಶಯವಿಲ್ಲ.

ಉದ್ಯೋಗಾವಕಾಶ

ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ನಿಮ್ಮ ಬಯೋಡೇಟಾಗೆ ಒಂದು ತೂಕವನ್ನು ನೀವು ತಂದುಕೊಡಬಹುದು. ಇದರರ್ಥ ನೀವು ಒಬ್ಬ ಉದ್ಯೋಗಾಕಾಂಕ್ಷಿಯಾಗಿ ಉದ್ಯೋಗದಾತರನ್ನು ಆಕರ್ಷಿಸಬೇಕು ಎಂದಾದಲ್ಲಿ, ನಿಮಗೆ ಎರಡಕ್ಕಿಂತ ಹೆಚ್ಚು ಭಾಷೆಗಳು ಬರಲೇಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಹೆಚ್ಚು ಭಾಷೆಗಳನ್ನು ಕಲಿತವರಿಗೆ ಕಂಪನಿಗಳು ಮಣೆ ಹಾಕುತ್ತವೆ. ಕಂಪನಿಗೆ ಗ್ರಾಹಕರನ್ನು ಸೆಳೆಯಲು ನಿಮ್ಮ ಭಾಷೆಯು ಅವರಿಗೆ ಒಂದು ಸಾಧನವಾಗಿ ನೆರವಾಗುತ್ತದೆ. ಅದರಲ್ಲಿಯೂ ವಿದೇಶಿ ಭಾಷೆಗಳು ನಿಮಗೆ ಬರುವುದಾದಲ್ಲಿ, ನೀವು ಜಗತ್ತಿನ ಯಾವುದೇ ಮೂಲೆಯಲ್ಲಿ ಕೆಲಸವನ್ನು ಗಿಟ್ಟಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತೀರಿ. ಭಾಷಾಂತರಕಾರರಾಗಿ ಮತ್ತು ದುಭಾಷಿಗಳಾಗಿ ಮತ್ತು ಕ್ಲೈಂಟ್ ಸೇವೆ ಅಥವಾ ಮಾರ್ಕೆಟಿಂಗ್ ಇಲ್ಲವೇ ಗ್ರಾಹಕ ಸೇವೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ಹೆಚ್ಚು ಭಾಷೆಗಳನ್ನು ಬಲ್ಲ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಇರುತ್ತದೆ. ನಿಮ್ಮ ಭಾಷಾಜ್ಞಾನವೇ ನಿಮ್ಮ ಬಂಡವಾಳ ಎಂಬುದನ್ನು ಮರೆಯಬೇಡಿ. ಭಾಷೆ ಹೇಗೆ ಉದ್ಯೋಗಕ್ಕೆ ನೆರವಾಗುತ್ತದೆ ಎಂದು ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೀಡಿದ್ದೇವೆ ನೋಡಿ.

ಉದಾಹರಣೆ 1

ಪ್ರವಾಸ/ಆತಿಥ್ಯ ಕ್ಷೇತ್ರ: ಈ ಕ್ಷೇತ್ರದಲ್ಲಿನ ಗ್ರಾಹಕರು ಭಾಷೆಯೇ ತಿಳಿಯದ ಪ್ರದೇಶಕ್ಕೆ ಬರುವವರಾಗಿರಬಹುದು. ಅವರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು, ಅವರ ಭಾಷೆಯನ್ನೇ ತಿಳಿದಿರುವ ವ್ಯಕ್ತಿಯು ಅವರ ಸೇವೆಗೆ ನಿಂತರೆ, ಬಂದ ಅತಿಥಿಗಳು ಸಹ ಖುಷಿಯಾಗಿ ತಮ್ಮ ತಾಯ್ನೆಲದಲ್ಲಿಯೇ ಇದ್ದಂತಹ ಭಾವನೆಯನ್ನು ಹೊಂದುವುದರ ಜೊತೆಗೆ. ತಮ್ಮೊಂದಿಗೆ ಉತ್ತಮ ನೆನಪುಗಳನ್ನು ತಾಯ್ನಾಡಿಗೆ ಕೊಂಡೊಯ್ಯುತ್ತಾರೆ.

ಉದಾಹರಣೆ 2

ಪತ್ರಿಕೋದ್ಯಮ: ಒಂದು ವೇಳೆ ನೀವು ಒಬ್ಬ ವಿದೇಶಿ ವರದಿಗಾರರಾಗಿದ್ದು, ಬೇರೆ ದೇಶದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದಲ್ಲಿ ಅಥವಾ ಭಾರತದ ಒಂದು ಮೂಲೆಯಲ್ಲಿ ಜನಿಸಿದ ನಿಮಗೆ ಇದೇ ದೇಶದ ಮತ್ತೊಂದು ರಾಜ್ಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂದಲ್ಲಿ, ಆಗ ನಿಮ್ಮ ಸಹಾಯಕ್ಕೆ ಬರುವುದು ಭಾಷೆಯೇ!. ನಿಮಗೆ ಸ್ಥಳೀಯ ಭಾಷೆ ಬಾರದಿದ್ದಲ್ಲಿ, ವಸ್ತು ನಿಷ್ಠ ವರದಿಯನ್ನು ನಿಮ್ಮಿಂದ ಮಾಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಜನರ ಜೊತೆಗೆ ಬೆರೆತು ಅವರ ದೃಷ್ಟಿಕೋನದಿಂದ ಅವರ ಪರಿಸ್ಥಿತಿಯನ್ನು ಅರಿಯಲು ನಿಮಗೆ ಭಾಷೆ ನೆರವಾಗುತ್ತದೆ. ನೀವು ಅಲ್ಲಿನ ಸ್ಥಳೀಯ ಭಾಷೆಯನ್ನು ಮಾತನಾಡದೇ ಇದ್ದಲ್ಲಿ, ಅಲ್ಲಿನ ಪರಿಸ್ಥಿತಿಯು ನಿಮಗೆ ಪರಿಪೂರ್ಣವಾಗಿ ಅರ್ಥವಾಗುವುದೇ ಇಲ್ಲ ಎಂದು ಹೇಳಬಹುದು.

ಈ ಮೇಲಿನ ಅಭಿಪ್ರಾಯಗಳು ಮತ್ತು ಕಾರಣಗಳಿಗೆ ನೀವು ಸಹ ಸಮ್ಮತಿಸುವಿರಲ್ಲವೇ? ನಿಮ್ಮ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಗಳಿದ್ದಲ್ಲಿ, ದಯವಿಟ್ಟು ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

References :

[1] Marian, V., & Shook, A. (2012). The cognitive benefits of being bilingual. Cerebrum : the Dana forum on brain science, 2012, 13.

    Leave a Reply

    Your email address will not be published. Required fields are marked *