ಭಾರತೀಯ ಭಾಷೆಗಳ ಕುರಿತಾಗಿ ಒಂದು ಕಿರುಪರಿಚಯ

ಕೆಲವು ಪದಗಳು ಹಲವು ಭಾಷೆಗಳಲ್ಲಿ ಏಕೆ ಕಾಣಿಸಿಕೊಳ್ಳುತ್ತವೆ ಅಥವಾ ಹೋಲುತ್ತವೆ ಎಂದು ಎಂದಾದರೂ ಯೋಚಿಸಿದ್ದೀರಾ? ನಮ್ಮ ಎಲ್ಲ ಭಾಷೆಗಳು ಒಂದೇ ಮೂಲವನ್ನು ಹೊಂದಿವೆ ಎಂದೇ? ಈ ಕುರಿತಾಗಿ ಕೆಲವು ಉತ್ತರಗಳನ್ನು ಹುಡುಕಲು ಒಂದು ಪಕ್ಷಿನೋಟವನ್ನು ಹರಿಸೋಣ ಬನ್ನಿ.
Written by: Chandrasekhar G

Translated by: Deepak M

ಪ್ರತಿಯೊಂದು ಜೀವಿಯೂ ಆಹಾರ, ನಿದ್ದೆ, ಸಂತಾನೋತ್ಪತ್ತಿ ಮತ್ತು ಸ್ವಯಂ ಹಿತರಕ್ಷಣೆಯ ಕುರಿತಾಗಿ ಯೋಚಿಸುತ್ತವೆ.ಈ ಪ್ರವೃತ್ತಿಯನ್ನು ಮೀರಿ ಯೋಚಿಸುವುದು ಯೋಚನಾ ಶಕ್ತಿಯನ್ನು ಹೊಂದಿರುವ ಮಾನವ ಪ್ರಾಣಿಗೆ ಮಾತ್ರ ಸಾಧ್ಯ. ಮಾನವನೊಂದಿಗೆ ಹೋಲಿಸಿದರೆ, ಆನೆಯು ಗಾತ್ರದಲ್ಲಿ ದೊಡ್ಡದಾಗಿದೆ, ಆದರೆ ಅದರ ಮೆದುಳು ಒಂದು ಮಿತಿಯನ್ನು ಮೀರಿ ಯೋಚಿಸುವುದಿಲ್ಲ. ಆದರೆ ಮಾನವನ ಮೆದುಳು 70,000 ವರ್ಷಗಳ ವಿಕಸನದಲ್ಲಿ ತನ್ನ ಮಿತಿಗಳನ್ನು ಮೀರಿ ಸಾಗಿದೆ. ಕೆಲವರು ಇದನ್ನು “ಬೌದ್ಧಿಕ ಕ್ರಾಂತಿ” ಎಂದು ಕರೆದರು. ಈ ಮೆದುಳಿನ ವಿಕಸನದಿಂದ ಭಾಷಾ ವಿಚಾರದಲ್ಲಿ ಮಾನವನು ಹಲವಾರು ಪ್ರಗತಿಗಳನ್ನು ಸಾಧಿಸಿದನು. ಸಂಜ್ಞಾ ಭಾಷೆಯಿಂದ ಶುರು ಮಾಡಿ, ಪದಗಳು, ಆನಂತರ ವಾಕ್ಯಗಳು ಹಾಗೆಯೇ ಭಾಷೆಯನ್ನು ಅಭಿವೃದ್ಧಿಪಡಿಸಿದನು. ಅಲೆಮಾರಿ ಜೀವನವನ್ನು ತ್ಯಜಿಸಿದ ಮಾನವನು ಒಂದು ಕಡೆ ನಿಂತು ಸಂಘಜೀವನವನ್ನು ಶುರು ಮಾಡಿದಾಗ, ತನ್ನ ಗುಂಪಿನ ಜೊತೆಗೆ ಸಂವಹನ ನಡೆಸಲು ಈ ಭಾಷೆಯು ಅವನಿಗೆ ಅವಶ್ಯಕವೆಂದು ತೋರಿತು. ಹೀಗೆ ಮಾನವನು ಹಲವಾರು ಭಾಷೆಗಳನ್ನು ಈ ಅವಧಿಯಲ್ಲಿ ಅಭಿವೃದ್ಧಿಪಡಿಸಿದನು. ಆದರೆ ಕಾಲನ ಹೊಡೆತಕ್ಕೆ ಸಿಲುಕಿ ಬಹುತೇಕ ಭಾಷೆಗಳು ಇಂದು

ಉಳಿದುಕೊಂಡಿಲ. ಆದರೂ ನಾವು ಕೆಲವೊಂದು ಆಧಾರಗಳ ಮೂಲಕ ಈಗ ಉಳಿದುಕೊಂಡಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆ ಯಾವುದು ಎಂಬ ನಿರ್ಧಾರಕ್ಕೆ ಬರಬಹುದಾಗಿದೆ.

 

ಭಾರತದ ಭಾಷೆಗಳು

ಪ್ರಸ್ತುತ ವಿಶ್ವದಲ್ಲಿ ಸುಮಾರು 770 ಕೋಟಿ ಜನರು ಸುಮಾರು 5,000 ಕ್ಕೂ ಅಧಿಕ ಬಗೆಯ ಭಾಷೆಯನ್ನು ಮಾತನಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 130 ಕೋಟಿಜನರು ಸುಮಾರು 780ಕ್ಕೂ ಅಧಿಕ ಭಾಷೆಯನ್ನು ಮಾತನಾಡುತ್ತಿದ್ದಾರೆ. ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ (PLSI) 2010 ಮತ್ತು 2013 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸುಮಾರು 1961 ಭಾಷೆಗಳಲ್ಲಿ 1650 ಭಾಷೆಗಳು ಈಗಾಗಲೇ ತಮ್ಮ ಅಸ್ತಿತ್ವವನು ಕಳೆದುಕೊಂಡಿವೆಯಂತೆ. ಹೀಗೆಯೇ ಆದಲ್ಲಿ, ಇನ್ನುಳಿದ 100 ವರ್ಷಗಳಲ್ಲಿ, ಈ ಸಂಖ್ಯೆಯು ಕಳವಳಕಾರಿಯಾಗುವ ಹಂತಕ್ಕೆ ಹೋಗಿ ತಲುಪಿ, ನಾವು ಮಾತನಾಡುವ ಭಾಷೆಗಳನ್ನು 500ಕ್ಕೆ ಉಳಿಸಿದರೆ ಅಚ್ಚರಿಪಡಬೇಕಾಗಿಲ್ಲ. ಭಾರತದ ಸಂವಿಧಾನದ 8ನೇ ಅನುಸೂಚಿಯ ಅಡಿಯಲ್ಲಿ ಸುಮಾರು 22 ಅಧಿಕೃತ ಭಾಷೆಗಳನ್ನು ಪಟ್ಟಿ ಮಾಡಲಾಗಿದೆ ಅವುಗಳು ಯಾವುವೆಂದರೆ: 1) ಅಸ್ಸಾಮಿ 2) ಬೆಂಗಾಲಿ 3) ಬೋಡೊ 4) ಡೋಗ್ರಿ 5) ಗುಜರಾತಿ 6) ಹಿಂದಿ 7) ಕನ್ನಡ 8) ಕಾಶ್ಮೀರಿ 9) ಕೊಂಕಣಿ 10) ಮೈಥಿಲಿ 11) ಮಲಯಾಳಂ 12) ಮಣಿಪುರಿ 13) ಮರಾಠಿ 14) ನೇಪಾಳಿ 15) ಒರಿಯಾ 16) ಪಂಜಾಬಿ 17) ಸಂಸ್ಕೃತ 18) ಸಂತಾಲಿ 19) ಸಿಂಧಿ 20) ತಮಿಳು 21) ತೆಲುಗು ಮತ್ತು 22) ಉರ್ದು.

 

ಇವುಗಳ ಮೂಲಗಳ ಆಧಾರದ ಮೇಲೆ, ಭಾರತೀಯ ಭಾಷೆಗಳನ್ನು 4 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವು ಯಾವುವೆಂದರೆ: 1. ಇಂಡೋ-ಆರ್ಯನ್ ಭಾಷಾ ಕುಟುಂಬ 2. ದ್ರಾವಿಡ ಭಾಷಾ ಕುಟುಂಬ 3. ಆಸ್ಟ್ರೋ-ಏಷಿಯಾಟಿಕ್ ಭಾಷಾ ಕುಟುಂಬ 4. ಟಿಬೆಟೊ-ಬರ್ಮನ್ ಭಾಷಾ ಕುಟುಂಬ. ಈ 4 ಕುಟುಂಬಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಹೆಚ್ಚಿನ ಭಾರತೀಯ ಭಾಷೆಗಳ ಬಗ್ಗೆ ಕಲಿಯಬಹುದು.

 

ಇಂಡೋ-ಆರ್ಯನ್ ಭಾಷಾ ಕುಟುಂಬ

ಮೊದಲಿಗೆ ನಾವು ಇಂಡೋ-ಆರ್ಯನ್ ಭಾಷಾ ಕುಟುಂಬದ ಕುರಿತಾಗಿ ಮಾತನಾಡೋಣ. ಇದು ಇಂಡೋ-ಯೂರೋಪಿಯನ್ ಕುಟುಂಬದ ಒಂದು ಭಾಗವಾಗಿದೆ. ಈ ಇಂಡೋ-ಆರ್ಯನ್ ಭಾಷಾ ಕುಟುಂಬದಲ್ಲಿ ಮೊದಲಿಗೆ ಬರುವುದು ಸಂಸ್ಕೃತ. ಋಗ್ವೇದವು ಈ ಭಾಷೆಯಲ್ಲಿ ದೊರೆಯುವ ಪ್ರಥಮ ಸಾಹಿತ್ಯವಾಗಿದೆ. ಹಲವಾರು ವಿದ್ವಾಂಸರು ಇದನ್ನು ವಿಶ್ವದ ಅತ್ಯದ್ಬುತ ಕೃತಿ ಎಂದು ಕರೆದಿದ್ದಾರೆ. ಆದರೆ ಇದರ ಪರ ಮತ್ತು ವಿರೋಧವಾಗಿ ಹಲವಾರು ವಿದ್ವಂಸರು ವಾದ ಮಾಡಿದ್ದಾರೆ. ವೇದಗಳ ಕಾಲದಲ್ಲಿ ಸಂಸ್ಕೃತವನ್ನು ಧಾರ್ಮಿಕ ಕಾರ್ಯಗಳನ್ನು ಮತ್ತು ಅದಕ್ಕೆ ಸಂಬಂಧಪಟ್ಟ ವಿಧಿ ವಿಧಾನಗಳನ್ನು ನಡೆಸಲು ಹೆಚ್ಚಾಗಿ ಬಳಸುತ್ತಿದ್ದರು. ಇದು ಕ್ರಿ.ಪೂ. 1500 ರಿಂದ 1000 ದವರೆಗಿನ ಅವಧಿಯಾಗಿತ್ತು. ಆನಂತರ ವೇದಗಳ ಸಂಸ್ಕೃತವು ಧರ್ಮದಿಂದ ಹೊರಬಂದು ಶಾಸ್ತ್ರೀಯ ಸಂಸ್ಕೃತ ಎಂಬ ರೂಪದಲ್ಲಿ ಬೆಳೆದು, ಕಾವ್ಯ ಸೃಷ್ಟಿಗೆ ಕಾರಣವಾಯಿತು. ಇದು ಕ್ರಿ.ಪೂ 1000 ದಿಂದ 600 ರವರೆಗೆ ಬಳಕೆಯಲ್ಲಿತ್ತು. ಈ ಅವಧಿಯ ಸಂಸ್ಕೃತದಿಂದ ಪಾಳಿ, ಪ್ರಾಕೃತ ಮತ್ತು ಇನ್ನಿತರ ಅಪಭ್ರಂಶ ಭಾಷೆಗಳು ಉದಯವಾದವು. ಇವುಗಳು ಕ್ರಿ.ಪೂ 600 ರಿಂದ ಕ್ರಿ.ಶ. 1000 ದವರೆಗೆ ಇವುಗಳು ಚಾಲ್ತಿಯಲ್ಲಿದ್ದವು.

 

ಪಾಳಿ: ಕ್ರಿ.ಪೂ 563 ರಿಂದ 483 ರವರೆಗೆ. ಬುದ್ಧನು ತನ್ನ ಅನುಯಾಯಿಗಳಿಗೆ ಇದೇ ಭಾಷೆಯಲ್ಲಿ ಬೋಧನೆಗಳನ್ನು ಮಾಡಿದನು.

ಪ್ರಾಕೃತ : ಕ್ರಿ.ಪೂ 600 ರಿಂದ ಕ್ರಿ.ಶ 1000. ಇದು ಸಂಸ್ಕೃತದಿಂದ ರೂಪುಗೊಂಡ ಭಾಷೆಯಾಗಿದ್ದು, ಇದರ ವರ್ಣಮಾಲೆಯ ಸ್ವರೂಪ ಬದಲಾಯಿತು. ಇದು ಜೈನ ಮತ್ತು ಬೌದ್ಧ ಗ್ರಂಥಗಳಲ್ಲಿ ಮತ್ತು ನಾಟಕಗಳಲ್ಲಿ ಕಾಣಿಸಿಕೊಂಡ ಭಾಷೆಯಾಗಿದೆ.

ಅಪಭ್ರಂಶ: ಈ ಭಾಷೆಗಳು ಪ್ರಾಕೃತದಿಂದ ಉಗಮವಾದವು. ಪ್ರಾಕೃತ ಭಾಷೆಗಿಂದ ಭಿನ್ನವಾಗಿದ್ದ ಇದಕ್ಕೆ ಅಪ-ಭ್ರಂಶ ಎಂಬ ಹೆಸರನ್ನು ಇರಿಸಲಾಯಿತು.

ಆಧುನಿಕ ಭಾಷೆಗಳು: ಇವುಗಳು ಅಪಭ್ರಂಶ ಭಾಷೆಗಳಿಂದ ಜನಿಸಿದವು. ಇವುಗಳಲ್ಲಿ ಪ್ರಮುಖವಾದವು. 1. ಹಿಂದಿ 2. ಉರ್ದು 3. ಬೆಂಗಾಲಿ 4. ಪಂಜಾಬಿ 5. ಅಸ್ಸಾಮಿ 6. ಗುಜರಾತಿ 7. ಒರಿಯಾ 8. ಮರಾಠಿ 9. ಕಾಶ್ಮೀರಿ 10. ಕೊಂಕಣಿ 11. ನೇಪಾಳಿ 12. ಸಿಂಧಿ ಮತ್ತು ಇತರ ಭಾಷೆಗಳು.

 1. ಹಿಂದಿ: ಇದು ಸುಮಾರು ಕ್ರಿ.ಶ.1000 ದಿಂದ ಅಸ್ತಿತ್ವದಲ್ಲಿದೆ. ಸುಮಾರು 65 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಉತ್ತರ ಪ್ರದೇಶ, ಉತ್ತರಖಂಡ, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್ ಘಡ್ ರಾಜ್ಯಗಳಲ್ಲಿ ಹಿಂದಿಯನ್ನು ಮುಖ್ಯವಾಗಿ ಮಾತನಾಡುತ್ತಾರೆ. ಹಿಂದಿಯ ತರಹೇವಾರಿ ಆಡುಭಾಷೆಗಳು ಚಾಲ್ತಿಯಲ್ಲಿವೆ ಅದರಲ್ಲಿ ಮುಖ್ಯವಾಗಿ ರಾಜಸ್ಥಾನಿ, ವ್ರಾಜ, ಬಂದೇರಿ, ಮಾಳವಿ, ಭೋಜ್‌ಪುರಿ, ಮತ್ತು ಮೇವಾರ್ ಆಡು ಭಾಷೆಗಳು ಪಶ್ಚಿಮ ಭಾಗದಲ್ಲಿ ಚಾಲ್ತಿಯಲ್ಲಿವೆ. ಹಿಂದಿಯನ್ನು ಭಾರತದಾದ್ಯಂತ ಮಾತನಾಡುವುದರಿಂದಾಗಿ ಇದನ್ನು ರಾಷ್ಟ್ರ ಭಾಷೆ ಎಂದು ಪರಿಗಣಿಸಲಾಗಿದೆ ಎಂದು ಜನರು ಭಾವಿಸುತ್ತಾರೆ. ಹಿಂದಿಯ ಜೊತೆಗೆ ಸುಮಾರು 22 ಭಾಷೆಗಳನ್ನು ನಮ್ಮ್ ಸಂವಿಧಾನವು ಅಧಿಕೃತ ಭಾಷೆಗಳು ಎಂದು ಪರಿಗಣಿಸಿದೆ.
 2. ಉರ್ದು: ಸುಮಾರು 11 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ರೂಪುಗೊಂಡ ಭಾಷೆಯಿದಾಗಿದೆ. ಹೈದರಾಬಾದ್ ಪ್ರಾಂತ್ಯದಲ್ಲಿ ಇದಕ್ಕೆ ದಖ್ಖನೀ ಎಂದು ಸಹ ಕರೆಯುತ್ತಾರೆ.
 3. ಬೆಂಗಾಲಿ: ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಸುಮಾರು 30 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಸುಮಾರು ಕ್ರಿ.ಶ.1000 ದಿಂದ ಇದು ಬಳಕೆಯಲ್ಲಿದೆ.
 4. ಪಂಜಾಬಿ: ಸುಮಾರು 10 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಸುಮಾರು  ಕ್ರಿ.ಶ. 1000 ದಿಂದ ಇದು ಬಳಕೆಯಲ್ಲಿದೆ.
 5. ಗುಜರಾತಿ: ಸುಮಾರು 6.5 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಸುಮಾರು ಕ್ರಿ.ಶ. 1100 ದಿಂದ ಇದು ಬಳಕೆಯಲ್ಲಿದೆ.
 6. ಅಸ್ಸಾಮೀಸ್: ಸುಮಾರು 2.5 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಕ್ರಿ.ಪೂ. 1200 ರಷ್ಟು ಹಿಂದಿನದು.
 7. ಒರಿಯಾ: ಸುಮಾರು 4 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಕ್ರಿ.ಪೂ. 1200 ರಷ್ಟು ಹಿಂದಿನದು
 8. ಮರಾಠಿ: ಸುಮಾರು 8 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಸುಮಾರು ಕ್ರಿ.ಶ. 1100 ದಿಂದ ಬಳಕೆಯಲ್ಲಿದೆ.
 9. ಕಾಶ್ಮೀರಿ: ಸುಮಾರು 0.5 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಸುಮಾರು ಕ್ರಿ.ಶ. 900 ರಿಂದ ಬಳಕೆಯಲ್ಲಿದೆ.
 10. ಕೊಂಕಣಿ: ಸುಮಾರು 50  ಲಕ್ಷ ಜನ ಈ ಭಾಷೆಯನ್ನು ಮಾತನಾಡುತ್ತಾರೆ. ಗೋವಾ, ಮಂಗಳೂರು ಪ್ರಾಂತ್ಯ, ಮುಂಬೈ ಮತ್ತು ಕೇರಳದಲ್ಲಿ ಇದನ್ನು ಮಾತನಾಡುತ್ತಾರೆ.
 11. ನೇಪಾಳಿ: ಸುಮಾರು 1.7 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.
 12. ಸಿಂಧಿ: ಸುಮಾರು 2 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ.

ದ್ರಾವಿಡ ಭಾಷೆ ಕುಟುಂಬ

ಇಂಡೋ-ಆರ್ಯನ್ ಭಾಷಾ ಕುಟುಂಬದ ನಂತರ, ದ್ರಾವಿಡ ಭಾಷಾ ಕುಟುಂಬವು ಗಾತ್ರದ ವಿಷಯದಲ್ಲಿ ಎರಡನೆಯದು. ಈ ಕುಟುಂಬದಲ್ಲಿ, 23 ಭಾಷೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು 1. ತಮಿಳು, 2. ತೆಲುಗು, 3. ಕನ್ನಡ, 4. ಮಲಯಾಳಂ.

 1. ತಮಿಳು: ಇದು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಭಾರತ, ಶ್ರೀಲಂಕಾ, ಸಿಂಗಾಪುರ್ ಮತ್ತು ಮಲೇಷಿಯಾದಲ್ಲಿ ಸುಮಾರು 8 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಕ್ರಿ.ಪೂ. ಯುಗಕ್ಕೂ ಹಿಂದಿನ ಸಾಹಿತ್ಯವನ್ನು ಹೊಂದಿದೆ.
 2. ತೆಲುಗು: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ವಾಸಿಸುವ ಸುಮಾರು 8.5 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಇದು ಸುಮಾರು 2,000 ವರ್ಷಗಳ ಹಿಂದಿನದು.
 3. ಕನ್ನಡ: ಸುಮಾರು 4.5 ಕೋಟಿ ಜನರು ಈ ನಮ್ಮ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇದು ಸಹ ಸುಮಾರು 2,000 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಭಾಷೆಯಾಗಿದೆ.
 4. ಮಲಯಾಳಂ: ಕೇರಳದಲ್ಲಿ ವಾಸಿಸುವ ಸುಮಾರು 4 ಕೋಟಿ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಸುಮಾರು 1000 ವರ್ಷಗಳ ಹಿಂದೆ ಇದು ತಮಿಳಿನಿಂದ ಹುಟ್ಟಿತು.

ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮತ್ತು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಕೆಲವು ಸಾಮ್ಯತೆಗಳಿವೆ.

ಆಸ್ಟ್ರೋ-ಏಷಿಯಾಟಿಕ್ ಭಾಷಾ ಕುಟುಂಬ

ಆಸ್ಟ್ರೋ-ಏಷಿಯಾಟಿಕ್ ಭಾಷೆಯ ಕುಟುಂಬಕ್ಕೆ ಸಂತಾಲಿ, ಮುಂಡಾರಿ, ಹೂ, ಸಾವರಾ, ಕಾರ್ಕ್, ಜ್ವಾಂಗ್, ಕಾಶಿ, ನಿಕೋಬಾರಿಸ್ ಭಾಷೆಗಳು ಈ ಕುಟುಂಬಕ್ಕೆ ಸೇರಿವೆ.

ಟಿಬೆಟೊ-ಬರ್ಮನ್ ಭಾಷಾ ಕುಟುಂಬ

ಟಿಬೆಟೊ-ಬರ್ಮನ್ ಕುಟುಂಬದಲ್ಲಿ, ಬೋಡೋ, ಮಣಿಪುರಿ, ಲುಶ್ತಾ, ಗಾರೊ, ಭೂತಿಮಾ, ನೇವಾರಿ, ಲೆಪ್ಚಾ, ಅಸ್ಮಕ ಮತ್ತು ಮಿಕಿರ್ ಭಾಷೆಗಳು ಪ್ರಮುಖವಾದವುಗಳಾಗಿವೆ.
ಉಪಸಂಹಾರ: ಇಂಡೋ-ಆರ್ಯನ್ ಭಾಷಾ ಕುಟುಂಬದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ, ಹೆಚ್ಚಿನವು ಸಂಸ್ಕೃತದಲ್ಲಿ ಮೂಲವನ್ನು ಹೊಂದಿವೆ. ಈ ಭಾಷೆಯು ಕ್ರಮೇಣ ಸಮಾಜದಲ್ಲಿ ತನ್ನ ಪ್ರಭುತ್ವವನ್ನು ಕಳೆದುಕೊಂಡಿರುವುದರಿಂದ, ಆ ಭಾಷೆಯನ್ನು ಮಾತನಾಡುವವರ  ಸಂಖ್ಯೆ ಇಂದು 15,000 ಮಾತ್ರ ಎಂದು ಅಂದಾಜಿಸಲಾಗಿದೆ. ಮೃತ ಭಾಷೆಗಳ ಪಟ್ಟಿಗೆ ಅತ್ಯಂತ ಸನಿಹವಿರುವ ಭಾಷೆಗಳಲ್ಲಿ ಸಂಸ್ಕೃತ ಅಗ್ರಸ್ಥಾನದಲ್ಲಿದೆ. ಆದರೂ ಇದನ್ನು ಇಂದಿಗೂ ಹೆಚ್ಚಾಗಿ ಧಾರ್ಮಿಕ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ.

  Leave a Reply

  Your email address will not be published. Required fields are marked *