ಭಾಷಾಂತರವು ನಿಮಗೆ ಅನುಕೂಲ ಮಾಡಿಕೊಡುತ್ತದೆಯೇ?

ಈ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಇಂಗ್ಲಿಷಿನಲ್ಲಿಯೇ ವ್ಯವಹಾರ ನಡೆಯುತ್ತದೆ ಎಂದು ಭಾವಿಸಬೇಡಿ. ನಮ್ಮ ನಮ್ಮ ಮಾತೃ ಭಾಷೆಗಳಲ್ಲಿಯೂ ಸಹ ವ್ಯವಹಾರ ಇನ್ನೂ ನಡೆಯುತ್ತಿದೆ. ಅದಕ್ಕಾಗಿಯೇ ಬಹು ರಾಷ್ಟ್ರೀಯ ಕಂಪನಿಗಳು ಸಹ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ತಮ್ಮ ಸೇವೆಯನ್ನು ಮತ್ತು ಕೈಪಿಡಿಗಳನ್ನು ಒದಗಿಸುತ್ತಿವೆ. ಮಾರುಕಟ್ಟೆಯ ಅಧ್ಯಯನದ ಆಧಾರದ ಮೇಲೆ ಹೇಳುತ್ತಿದ್ದೇವೆ, ನಿಮ್ಮ ಕಂಪನಿ ಅಥವಾ ವ್ಯವಹಾರದ ಕುರಿತು ಇರುವ ವಿಷಯಗಳನ್ನು ಭಾಷಾಂತರ ಮಾಡುವುದರಿಂದ ನೀವೂ ಸಹ ನಿಮ್ಮ ವ್ಯವಹಾರ ಕ್ಷೇತ್ರವನ್ನು ಜಾಗತಿಕವಾಗಿ ಹೆಚ್ಚಿಸಿಕೊಳ್ಳಬಹುದು.

ನಮ್ಮ ಜಗತ್ತಿನಲ್ಲಿ ಸರಿ ಸುಮಾರು 5000 ಭಾಷೆಗಳಿವೆ ಎಂದು ಒಂದು ಅಂದಾಜು ಹೇಳುತ್ತದೆ. ಇವುಗಳಲ್ಲಿ ಹಲವಾರು ಭಾಷೆಗಳು ಲಿಖಿತವಾಗಿ ಬರೆಯಬಹುದಾಗಿವೆ. ಮತ್ತು ಕೆಲವನ್ನು ಕೇವಲ ಮಾತನಾಡಬಹುದು. ಇನ್ನು ಕೆಲವು ಭಾಷೆಗಳು ಲಿಖಿತವಾಗಿ ಮತ್ತು ಮೌಖಿಕವಾಗಿ ಎರಡೂ ರೀತಿಯಲ್ಲಿ ಸಂವಹನಕ್ಕೆ ಅವಕಾಶ ಮಾಡಿಕೊಡುತ್ತವೆ. ಕೆಲವು ಭಾಷೆಗಳಂತೂ ಹಲವಾರು ಉಪ ಭಾಷೆಗಳನ್ನು ಒಳಗೊಂಡಿರುತ್ತದೆ. ಭಾಷಾಶಾಸ್ತ್ರದ ಪ್ರಕಾರ ಭಾರತದಲ್ಲಿ ಪ್ರತಿ 40 ಕಿ.ಮೀ ಗೆ ಭಾಷೆಯ ಸ್ವರೂಪ ಬದಲಾಗುತ್ತದೆಯಂತೆ. ಆದರೂ ಸಾರಿಗೆ ಸಂಪರ್ಕದ ವ್ಯಾಪಕ ಅಭಿವೃದ್ಧಿಯ ಕಾರಣವಾಗಿ ಇಡೀ ಜಗತ್ತೆ ಒಂದು ಊರಿನಂತಾಗಿರುವ ಈ ಕಾಲದಲ್ಲಿ ಭಾಷೆಯು ನಮ್ಮನ್ನೆಲ್ಲ ಹಿಡಿದಿಡುವ ಮತ್ತು ಗುರುತಿಸುವ ಒಂದು ಸಾಧನವಾಗಿ ಮಾರ್ಪಟ್ಟಿದೆ. ಹೀಗಾಗಿಯೇ ನಾವು ಕನ್ನಡಿಗರು, ನಾವು ಈ ಭಾಷೆಯವರು ಎಂದು ಗರ್ವದಿಂದ ಜನ ಒಟ್ಟುಗೂಡುವುದನ್ನು ನಾವು ಇಂದಿಗೂ ನೋಡಬಹುದು.

ಈ ಅಂಶವು ಕಂಪನಿಗಳ ಮಾರುಕಟ್ಟೆಯನ್ನು ವಿಸ್ತರಿಸುವ ಹೊಸ ದಾರಿಯನ್ನು ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮೇಲಿನ ರಾಷ್ಟ್ರಗಳಲ್ಲಿ ಬಹುತೇಕ ಮಂದಿಗೆ ಇಂಗ್ಲಿಷ್ ಕುರಿತಾದ ಅಲ್ಪ ತಿಳುವಳಿಕೆ ಇದ್ದಿದ್ದು ನಿಜವೇ ಆದರೂ ಅದರ ಮೇಲೆ ಹೆಚ್ಚಿನ ಹಿಡಿತ ಇರಲಿಲ್ಲ. ಯಾವಾಗ ಇವರಿಗೆ ತಮ್ಮ ಭಾಷೆಯಲ್ಲಿಯೇ ಹೊಸ ಉತ್ಪನ್ನದ ಅರಿವನ್ನು ಮೂಡಿಸಲಾಯಿತೋ, ಆಗ ಅವರು ಆ ಉತ್ಪನ್ನವನ್ನು ಬಳಸಲು ಆಸಕ್ತಿ ತೋರಿದ್ದು ನಿಜ. ಹೊಸ ಉತ್ಪನ್ನವನ್ನು ತಯಾರಿಸಿದಾಗ ಅದನ್ನು ಹೇಗೆ ಬಳಸಬೇಕೆಂಬ ಮಾಹಿತಿಯನ್ನು ಕೇವಲ ಇಂಗ್ಲಿಷಿನಲ್ಲಿ ನೀಡುವುದು ಈಗ ಊಹಿಸಲು ಸಹ ಸಾಧ್ಯವಿಲ್ಲದ ವಿಚಾರವಾಗಿದೆ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಪ್ರತಿ ಉತ್ಪನ್ನವು ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ತರುವುದು ಲಾಭದಾಯಕ ಮತ್ತು ಗ್ರಾಹಕರನ್ನು ಸುಲಭವಾಗಿ ತಲುಪಬಹುದಾದ ಮಾರ್ಗ ಎಂದು ಕಂಪನಿಗಳು ಭಾವಿಸಲು ಆರಂಭಿಸಿವೆ.

2000-2018 ರಲ್ಲಿ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ಇಂಟರ್‌ನೆಟ್ ಬಳಕೆದಾರರ ಪ್ರಮಾಣವು ಇದ್ದಕ್ಕಿದ್ದಂತೆ 1000% ಹೆಚ್ಚಾಯಿತು. ಕುತೂಹಲಕಾರಿ ವಿಚಾರ ಏನೆಂದರೆ ಇದಕ್ಕೆ ಕಾರಣ, ಈ ಬಳಕೆದಾರರು ಇಂಟರ್‌ನೆಟ್‌ನಲ್ಲಿ ತಮಗೆ ಬೇಕಾದ ವಿಷಯವನ್ನು ತಮ್ಮ ಮಾತೃಭಾಷೆಯಲ್ಲಿಯೇ ಹುಡುಕಬಹುದಾದ ಸೌಕರ್ಯ ಸಿಕ್ಕಿದ್ದೇ ಇದಕ್ಕೆ ಕಾರಣ. ಇದು ಹಲವಾರು ಬಹು ರಾಷ್ಟ್ರೀಯ ಕಂಪನಿಗಳಿಗೆ ಹೊಸ ಅವಕಾಶದ ಬಾಗಿಲನ್ನು ತೆರೆದರೆ, ಇನ್ನೂ ಕೆಲವು ಕಂಪನಿಗಳಿಗೆ ಸವಾಲನ್ನು ಸಹ ಒಡ್ಡಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಭಾಷೆಯೆಂಬುದು ಗ್ರಾಹಕರನ್ನು ಸೆಳೆಯುವ ಸಾಧನ ಎಂಬ ವಿಚಾರವನ್ನು ಇದು ದೃಢಪಡಿಸಿತು.

ವಿಶ್ವದ ಎಲ್ಲೆಡೆಯೂ ಪ್ರತಿಷ್ಠೆಯಾಗಿರುವ ಫೋನಿನಿಂದ ಹಿಡಿದು, ಸ್ಥಳೀಯವಾಗಿ ತಯಾರಿಸಲ್ಪಡುವ ಒಂದು ಸಣ್ಣ ಉತ್ಪನ್ನದವರೆಗೆ ಎಲ್ಲವು ಈಗ ಇಂಗ್ಲಿಷಿನ ಜೊತೆಗೆ ಸ್ಥಳೀಯ ಭಾಷೆಯಲ್ಲಿಯೂ ಸಹ ಲಭ್ಯವಿವೆ. ಹೀಗೆ ಕಂಪನಿಗಳು ಮೂಲ ವಿಷಯವನ್ನು ಇಂಗ್ಲಿಷಿನಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ನೀಡುವ ಮೂಲಕ ತಮ್ಮ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿವೆ.

ಗ್ರಾಹಕರು ತಮ್ಮ ಮಾತೃ ಭಾಷೆಗೆ ಆಧ್ಯತೆ ನೀಡುತ್ತಾರೆಯೇ?

ಒಂದು ಅಧ್ಯಯನದ ಪ್ರಕಾರ ಖಂಡಿತ ಹೌದು. ಇಟಲಿಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ಅಧ್ಯಯನದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಉತ್ಪನ್ನದ ಎರಡು ಮಾದರಿಗಳನ್ನು ನೀಡಲಾಯಿತು. ಅದರಲ್ಲಿ ಒಂದು ಇಂಗ್ಲಿಷ್ ಮತ್ತೊಂದು ಇಟಲಿಯಲ್ಲಿ ಮಾಹಿತಿಯನ್ನು ನೀಡಲಾಗಿತ್ತು. ಇವೆರಡರಲ್ಲಿ ಒಂದನ್ನು ಆರಿಸಿಕೊಳ್ಳಲು ತಿಳಿಸಿದಾಗ, ಆ ವಿದ್ಯಾರ್ಥಿಗಳಲ್ಲಿ ಬಹುಪಾಲು ಜನ ಇಟಲಿಯಲ್ಲಿ ಮಾಹಿತಿ ಇದ್ದ ಉತ್ಪನ್ನಗಳನ್ನೇ ಆರಿಸಿಕೊಂಡರು. ಈ ಮೊದಲೇ ತಿಳಿಸಿದಂತೆ ಜಾಗತಿಕ ದೊಡ್ಡ್ ಕಂಪನಿಗಳಿಂದ ಹಿಡಿದು ಸ್ಥಳೀಯವಾಗಿ ತಯಾರಿಸಲ್ಪಡುವ ಉತ್ಪನ್ನಗಳವರೆಗೆ ಎಲ್ಲಾ ಕಂಪನಿಗಳು ಈಗ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಭಾಷೆ ಎರಡರಲ್ಲೂ ತಮ್ಮ ಉತ್ಪನ್ನವನ್ನು ಪ್ರಚಾರ ಮಾಡುವುದರಿಂದ ಹಿಡಿದು, ಬಳಕೆಯವರೆಗಿನ ಮಾಹಿತಿಗಳನ್ನು ನೀಡುತ್ತಿವೆ. ಇದಕ್ಕೆ ಮೂಲ ಕಾರಣ ಗ್ರಾಹಕರನ್ನು ಸಂತೃಪ್ತಪಡಿಸುವುದೇ ಆಗಿರುತ್ತದೆ.

ತನ್ನ ಸ್ಥಳಿಯ ಭಾಷೆಯಲ್ಲಿ ಉತ್ಪನ್ನದ ಮಾಹಿತಿ ದೊರೆತಾಗ ಗ್ರಾಹಕರು ಸಹ ವಿಶ್ವಾಸಾರ್ಹತೆಯಿಂದ ಉತ್ಪನ್ನವನ್ನು ಬಳಸಲು ಆಸಕ್ತಿ ತೋರುತ್ತಾರೆ ಎಂಬುದು ಸತ್ಯ.
ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು ಸ್ಥಳೀಯ ಭಾಷೆಯಲ್ಲಿ ಲಭ್ಯವಾದರೆ ಗ್ರಾಹಕರು ಅದನ್ನು ಸುಲಭವಾಗಿ ಅರ್ಥ ಮಾಡಿಕೊಂಡು, ಓದುತ್ತಾರೆ ಮತ್ತು ಬಳಸುತ್ತಾರೆ ಎಂಬುದು ಈಗಾಗಲೇ ಬಹಳಬಾರಿ ಸಾಭೀತಾಗಿದೆ.

ಜಾಹೀರಾತುಗಳು ಮತ್ತು ಪ್ರಚಾರ ಸಾಮಗ್ರಿಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾದಾಗ ಹೆಚ್ಚು ಜನರಿಗೆ ತಲುಪಿವೆ ಎಂದು ಅಧ್ಯಯನಗಳು ತಿಳಿಸಿವೆ.

ಭಾರತದಂತಹ ದೇಶದಲ್ಲಿ ಎಲ್ಲರೂ ಇಂಗ್ಲಿಷ್ ಸಾಕ್ಷರರಾಗಿರುವುದಿಲ್ಲವಾದ್ದರಿಂದ, ಹೆಚ್ಚು ಹೆಚ್ಚು ಜನರನ್ನು ತಲುಪಲು ಪ್ರಾದೇಶಿಕ ಭಾಷೆಗಳೇ ಪ್ರಮುಖ ಸಾಧನ ಎಂಬುದನ್ನು ಮರೆಯಬಾರದು.

ಪ್ರಾದೇಶಿಕ ಭಾಷೆಗಳು ಮತ್ತೇನು ಕೊಡುಗೆ ನೀಡಬಲ್ಲವು?

ಪ್ರಾದೇಶಿಕ ಭಾಷೆಗಳು ಮತ್ತೇನು ಕೊಡುಗೆ ನೀಡಬಲ್ಲವು?

ಈ ಮೇಲೆ ತಿಳಿಸಿದ ಪ್ರಯೋಜನಗಳ ಜೊತೆಗೆ, ಪ್ರಾದೇಶಿಕ ಭಾಷೆಗಳು ಒಂದು ಉತ್ಪನ್ನವನ್ನು ಗ್ರಾಹಕನಿಗಾಗಿಯೇ ತಯಾರಿಸಿದ ಭಾವನೆಯನ್ನು ನೀಡಬಲ್ಲವು. ನಿಜ, ಉತ್ಪನ್ನವನ್ನು ತನ್ನ ಭಾಷೆಯಲ್ಲಿಯೇ ಓದಿ, ಬಳಸಲು ಆರಂಭಿಸುವ ಗ್ರಾಹಕ ನಿಜಕ್ಕೂ ಕಂಪನಿ ಇದನ್ನು ತನಗಾಗಿಯೇ ತಯಾರಿಸಿದೆ ಎಂಬ ಭಾವನೆಯನ್ನು ತಳೆಯುತ್ತಾನೆ. ಹೀಗೆ ಭಾಷೆಯು ಗ್ರಾಹಕರ ಮನಸ್ಸನ್ನು ಗೆಲ್ಲುವ ಸುಲಭ ಮಾರ್ಗವಾಗಿ ಸಹ ಕೆಲಸ ಮಾಡುತ್ತದೆ.

ಇನ್ನೂ ಕೆಲವು ಕಡೆ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ನೀಡಬೇಕು ಎಂಬ ಕಾನೂನು ಸಹ ಇರುವುದರಿಂದ ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ.

ಹೀಗೆ ಹಲವಾರು ದೃಷ್ಟಿಕೋನಗಳಿಂದ ಸ್ಥಳೀಯ ಭಾಷೆಗಳಲ್ಲಿ ಅನುವಾದ ಮಾಡುವಿಕೆಯು ಕಂಪನಿಗಳಿಗೆ ಮತ್ತು ಉತ್ಪಾದಕರಿಗೆ ಸಹಾಯ ಮಾಡುತ್ತವೆ.

ಉಲ್ಲೇಖಗಳು

[1] https://www.internetworldstats.com/stats.htm

[2] Can’t Read, Won’t Buy: Why Language Matters on Global Websites By Donald A. DePalma, Benjamin B. Sargent, and Renato S. Beninatto September 2006

[3] Cross-Cultural Consumer Behavior: Use of Local Language for Market Communication—A Study in Region Friuli Venezia Giulia (Italy) by Franco Rosa, Sandro Sillani & Michela Vasciaveo

Pages 621-648 | Journal of Food Products Marketing Volume 23, 2017 – Issue 6

[4] User language preferences online; Survey conducted by The Gallup Organization, Hungary upon the request of Directorate-General Information Society and Media

[5] The Influence of Language of Advertising on Customer Patronage Intention: Testing Moderation Effects of Race Muhammad Sabbir Rahman, Fadi Abdel Muniem Abdel Fattah, 1 2

Nuraihan Mat Daud and Osman Mohamad ; Middle-East Journal of Scientific Research 20 (Language for Communication and Learning): 67-74, 2014

Leave a Reply

Your email address will not be published. Required fields are marked *