ರೂಪಾಂತರ – ಸೃಜನಶೀಲ ವಿಷಯವನ್ನು ಭಾಷಾಂತರ ಮಾಡುವ ಕಲೆ

ಅನುವಾದ ಮಾಡುವಿಕೆಯು ಈಗ ಕೇವಲ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ತಾಂತ್ರಿಕ ಕ್ಷೇತ್ರದ ಪ್ರಗತಿಯ ಕಾರಣದಿಂದಾಗಿ ಇಂದು ಅನುವಾದ ಕ್ಷೇತ್ರವು ‘ಲೋಕಲೈಜೇಶನ್’ ಎಂಬ ಹೊಸ ಹೆಸರನ್ನು ಪಡೆದುಕೊಂಡು, ನಮ್ಮ ಸ್ಥಳೀಯ ಸಂಸ್ಕೃತಿಯನ್ನು ತಂತ್ರಜ್ಞಾನ ರಂಗದಲ್ಲಿಯೂ ಸಹ ತರುವ ಕೆಲಸವನ್ನು ಮಾಡುತ್ತಿದೆ. ಆದರೆ ತಾಂತ್ರಿಕ ವಿಷಯದ ಅನುವಾದವು ನಿಃಸತ್ವಯುತವಾದ ಅನುಭವವನ್ನು ಬಳಕೆದಾರರಿಗೆ ನೀಡಬಾರದೆಂದು, ಈ ಬಗೆಯ ಅನುವಾದದಲ್ಲಿಯೂ ಸಹ ಸೃಜನಶೀಲತೆಯನ್ನು ತರುವ ಪ್ರಯತ್ನ ಈಗ ನಡೆಯುತ್ತಿದೆ. ಹೀಗೆ ಇದರಲ್ಲಿ ಸೃಜನಶೀಲತೆಯನ್ನು ತರಲು ಮೊದಲು ಮೂಲ ಪಠ್ಯದ ಭಾವವನ್ನು ಮತ್ತು ಅದರ ಅರ್ಥವನ್ನು ಅರಿತುಕೊಂಡಿರಬೇಕಾಗುತ್ತದೆ.
Written by: Shankar G

Translated by: Deepak M

ಒಬ್ಬ ತಾಂತ್ರಿಕ ಅನುವಾದ ಸೇವೆಯನ್ನು ಒದಗಿಸುವ ಏಜೆನ್ಸಿಯಾಗಿ ನಮಗೆ ಆಗಾಗ ಅನುವಾದ ಮಾಡುವ ಸವಾಲುಗಳು ಬರುತ್ತಲೇ ಇರುತ್ತವೆ. ಉದಾಹರಣೆಗೆ: ಒಂದು ಪಾಶ್ಚಿಮಾತ್ಯ ಪದ್ಯವನ್ನು ನಮಗೆ ನೀಡಿದಾಗ, ಅದನ್ನು ಭಾರತೀಯ ಓದುಗರ/ಬಳಕೆದಾರರ ಭಾವನೆಗಳಿಗೆ ತಕ್ಕ ಹಾಗೆ ಅನುವಾದಿಸುವ ಕಾರ್ಯವು ಅಂತಹ ಒಂದು ಸವಾಲುಗಳಲ್ಲಿ ಒಂದಾಗಿತ್ತು. ಏಕೆಂದರೆ ವರ್ಣಬೇಧ ನೀತಿಯ ಭಾವನೆಗಳನ್ನು ಹೊಂದಿರುವ ಪದ್ಯವನ್ನು ಅದರ ಅಂತಃಸತ್ವದ ಜೊತೆಗೆ ಈ ನೆಲದ ಜನರಿಗೆ ತಿಳಿಸುವಾಗ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಪದ್ಯದಲ್ಲಿರುವ ಪ್ರತಿ ಪದವನ್ನು ಅನುವಾದ ಮಾಡಲು ಹೋದರೆ ನಮಗೆ ನಿಜಕ್ಕೂ ಅದರ ಭಾವ ಮತ್ತು ಅಂತಃಸತ್ವ ತಿಳಿಯುವುದೇ ಇಲ್ಲ. ಹೀಗಾಗಿ ನಾವು ಆ ಪದ್ಯವನ್ನು ರೂಪಾಂತರ ಮಾಡಬೇಕಾಯಿತು. ಆ ಪದ್ಯವನ್ನು ನಮ್ಮ ನೆಲದ ಸೊಗಡಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುವಿಕೆಯನ್ನೇ ರೂಪಾಂತರ ಎಂದು ಕರೆಯುತ್ತಾರೆ. ಮೂಲ ಭಾಷೆಯಲ್ಲಿರುವ ಪಠ್ಯ ಅಥವಾ ಸಾಹಿತ್ಯದ ಅಂತಃಸತ್ವ ಕೆಡದಂತೆ, ಅದೇ ಭಾವನೆ ಮತ್ತು ಅರ್ಥ ಎರಡೂ ಈ ನಾಡಿನ ಸಂಸ್ಕೃತಿಯ ಮೂಲಕ ವ್ಯಕ್ತಪಡಿಸುವ ಕೌಶಲ್ಯವನ್ನೇ ರೂಪಾಂತರ ಎನ್ನಬಹುದು. ಹೀಗೆ ರೂಪಾಂತರ ಮಾಡಬೇಕಾದರೆ ನಮಗೆ ನಾವೇ ಕೆಲವೊಂದು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತವೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ:

  • ಸಂದೇಶದ ನಿಜ ಭಾವವೇನು? ಒಮ್ಮೊಮ್ಮೆ ವಾಕ್ಯಗಳು ಸರಳವಾಗಿ ಅಥವಾ ಅರ್ಥವಾದಂತೆ ತೋರುವುದಾದರೂ ಅದರ ನಿಜ ಅರ್ಥ ಬೇರೆಯೇ ಆಗಿರುತ್ತದೆ. ಅದರಲ್ಲೂ ಪದ್ಯ ಮತ್ತು ಜಾಹೀರಾತುವಿನಂತಹ ಪಠ್ಯಗಳು ಬೇರೆಯೇ ಅರ್ಥವನ್ನು ನೀಡುತ್ತಿರುತ್ತವೆ. ಹಾಗಾಗಿ ಪದ್ಯವಾಗಲಿ, ಜಾಹೀರಾತಾಗಲಿ ಅಥವಾ ಇನ್ನಿತರ ಪಠ್ಯವಾಗಲಿ ಮೊದಲು, ಅದನ್ನು ಸಂಪೂರ್ಣವಾಗಿ ಓದಿ ಅರ್ಥವನ್ನು ತಿಳಿದುಕೊಳ್ಳಿ.
  • ಪಠ್ಯವು ಯಾವ ರಸವನ್ನು ಹೊಂದಿದೆ? ಅದು ಸಂತೋಷವನ್ನು, ದುಃಖವನ್ನು ಅಥವಾ ಕೋಪವನ್ನು ಹೊಮ್ಮಿಸುತ್ತಿದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಪದ್ಯವಾದಲ್ಲಿ ಅದು ಜನಪದವೇ, ಭಕ್ತಿಗೀತೆಯೇ ಅಥವಾ ಇನ್ನಿತರ ಪದ್ಯವೇ? ಎಂದು ತಿಳಿದುಕೊಳ್ಳಬೇಕು.
  • ನೀವು ರೂಪಾಂತರ ಮಾಡಿದ ವಿಷಯವನ್ನು ಓದುವವರು ಯಾರು? ನಗರದಲ್ಲಿ ನೆಲೆಸಿರುವವರೇ? ಇಲ್ಲವೇ ಹಳ್ಳಿಯಲ್ಲಿರುವವರೇ? ಯಾವ ಮಟ್ಟದ ವಿದ್ಯಾರ್ಹತೆಯನ್ನು ಸಂಪಾದಿಸಿದವರು ಇದನ್ನು ಓದುತ್ತಾರೆ? ಇದನ್ನು ಗ್ರಾಂಥಿಕವಾಗಿ ಅನುವಾದಿಸಬೇಕೆ? ಸರಳ ಭಾಷೆಯಲ್ಲಿ ಅನುವಾದಿಸಬೇಕೆ?
  • ನಿಮ್ಮ ಓದುಗರಿಗೆ ಮೂಲ ಪದ್ಯ/ಪಠ್ಯದಲ್ಲಿರುವ ಯಾವ ಅಂಶಗಳು ಪೂರಕವಾಗಿವೆ ಅಥವಾ ಸಂಬಂಧಪಟ್ಟಿವೆ. ನಿಮ್ಮ ಓದುಗರ ಸಂಸ್ಕೃತಿಗೆ ಈ ವಿಷಯ ಪೂರಕವಾಗಿದೆಯೇ? ಮೂಲ ಪಠ್ಯದಲ್ಲಿರುವ ರೂಪಕಗಳು, ಉಪಮೆಗಳು ಮತ್ತು ನಾಣ್ಣುಡಿಗಳು ಇಲ್ಲಿನ ಜನರಿಗೂ ಸಲ್ಲುತ್ತವೆಯೇ?
  • ಈ ರೂಪಾಂತರವನ್ನು ಓದಿದ ಜನರು ಯಾವ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು? ಅವರಲ್ಲಿ ಉದ್ಭವಿಸುವ ಪ್ರಶ್ನೆಗಳು ಯಾವುವು, ಈ ಪ್ರಶ್ನೆಗಳು ಈ ಮೇಲಿನ ಎರಡನೆಯ ಪ್ರಶ್ನೆಯನ್ನೇ ಹೋಲಬಹುದು.

ಈ ಪ್ರಶ್ನೆಗಳಿಗೆ ನಾವು ಸಮರ್ಪಕವಾಗಿ ಉತ್ತರಿಸಿದ ನಂತರ ನಾವು ರೂಪಾಂತರ ಮಾಡಲು ಆರಂಭಿಸಬೇಕು. ಆದ್ದರಿಂದಲೇ ಇದನ್ನು ಅನುವಾದ ಎಂದು ಹೇಳದೆ, ರೂಪಾಂತರ ಎಂದು ನಾವು ಕರೆಯುವುದು. ಇತರೆ ಭಾಷೆಗಳ ಮೂಲ ಪಠ್ಯವನ್ನು ಓದಿ, ಅದನ್ನು ನಮ್ಮ ಭಾಷೆಯಲ್ಲಿಯೇ ನೈಜವಾಗಿ ಬರೆಯಲಾಗಿದೆಯೇನೋ ಎಂಬಂತೆ ಅನುವಾದವನ್ನು ಮಾಡಬೇಕು. ಇಲ್ಲಿನ ಪ್ರತಿ ಸಾಲುಗಳಲ್ಲಿ ಎಲ್ಲಿಯೂ ಕೃತಕತೆ ಎದ್ದು ಕಾಣಬಾರದು, ಆ ಮಟ್ಟಿಗೆ ಅನುವಾದವು ಸೃಜನಶೀಲತೆಯಿಂದ ಕೂಡಿ, ಕನ್ನಡದ್ದೇ ಆದ ವಿಷಯವಾಗಿ ಬೆರೆತು ಹೋಗಬೇಕು!

ಓದುಗರು ಇದನ್ನು ಓದಿದಾಗ ಅವರಿಗೆ ಇದು ತಮ್ಮದೆ ಭಾಷೆಯ ಮೂಲ ಸಾಹಿತ್ಯ ಎಂಬ ಭಾವನೆ ಬಂದಲ್ಲಿ, ನೀವು ಗೆದ್ದಂತೆ. ಒಮ್ಮೊಮ್ಮೆ ಆಭಾಸವಾಗಿ ಓದುಗರು ಅನುವಾದವನ್ನು ಆಡಿಕೊಂಡು ನಗುವಂತಹ ಸನ್ನಿವೇಶಗಳು ಸಹ ಸೃಷ್ಟಿಯಾದದ್ದುಂಟು.

ಆದರೂ ನಾವು ಪ್ರತಿದಿನ ನಮಗೆ ಪದ್ಯಗಳು ಮತ್ತು ಸಾಹಿತ್ಯಗಳಂತಹ ವಿಷಯಗಳೇ ಅನುವಾದಕ್ಕೆ ಬರುತ್ತವೆ ಎಂದು ಹೇಳುವುದಿಲ್ಲ. ಆದರೆ ಜಾಹೀರಾತು, ಸಬ್ ಟೈಟಲ್, ಮನೋರಂಜನೆಯ ಕುರಿತಾದ ವಿಷಯಗಳು ಇತ್ಯಾದಿಗಳಿಗೆ ಈ ರೂಪಾಂತರವು ತಪ್ಪದೆ ಬೇಕಾಗುತ್ತದೆ. ಇವುಗಳು ನಮ್ಮ ದೈನಂದಿನ ಕೆಲಸಗಳ ಅವಿಭಾಜ್ಯ ಅಂಗವಾಗಿವೆ. ಆದ್ದರಿಂದ ಜಾಹೀರಾತು ಕ್ಷೇತ್ರದಲ್ಲಿ ನಮ್ಮ ಕ್ಲೈಂಟ್‌ಗಳ ಉತ್ಪನ್ನಗಳನ್ನು ಆಕರ್ಷಣೀಯಗೊಳಿಸಲು ನಮಗೆ ಈ ರೂಪಾಂತರ ತೀರಾ ಅವಶ್ಯಕ. ಈ ರೂಪಾಂತರಗಳು ಸಂಸ್ಕೃತಿ, ಗಡಿ, ಭಾಷೆಗಳ ಸೀಮೆಯನ್ನು ದಾಟಿ ಉತ್ಪನ್ನದ ಯಶಸ್ಸಿಗೆ ಕಾರಣೀಭೂತವಾಗುತ್ತವೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಭಾವನೆಗಳು ಭಾಷೆಗಳ ಕೋಟೆಯನ್ನು ದಾಟುವುದಿಲ್ಲ. ಸರಿಯಾದ ರೂಪಾಂತರವನ್ನು ಮಾಡಿದ್ದೇ ಆದಲ್ಲಿ, ಮೂಲ ಭಾಷೆಯಲ್ಲಿನ ಭಾವನೆಗಳು ಆ ಕೋಟೆಯನ್ನು ದಾಟಿ ಇತರರಿಗೂ ಸಹ ತುಲುಪುವುದರಲ್ಲಿ ಸಂಶಯವಿಲ್ಲ.

ಅದು ಪ್ರೇಮ್‌ಚಂದ್ ಆಗಿರಬಹುದು, ವೇಮನ ಆಗಿರಬಹುದು, ಕುವೆಂಪು ಆಗಿರಬಹುದು ಅಥವಾ ಷೇಕ್ಸ್‌ಪಿಯರ್‌ ಆಗಿರಬಹುದು. ಯಾರೇ ಆಗಿರಲಿ, ಭಾಷೆಗಳು ಯಾವುದೇ ಸಾಹಿತ್ಯ ಮತ್ತು ಜ್ಞಾನಕ್ಕೆ ಒಂದು ಅಡ್ಡಗೋಡೆಯಾಗುವುದು ಬೇಡ. ಮಾನವೀಯತೆಯ ಮೂಲ ಸೆಲೆಯಾದ ಕೊಡು ಕೊಳ್ಳುವಿಕೆಯನ್ನು ಭಾಷೆಯ ಗಡಿಗಳನ್ನು ದಾಟಿ ಹಂಚೋಣ. ಭಾಷೆ ತಿಳಿಯದಿರುವವರಿಗೆ ಅವರದ್ದೇ ಭಾಷೆಯಲ್ಲಿ ಅವರಿಗೆ ಬೇಕಾದ ಜ್ಞಾನವನ್ನು ಹಂಚೋಣ.

ಅತ್ಯುತ್ತಮವಾದ ರೂಪಾಂತರ ಅಥವಾ ಭಾವಾನುವಾದದ ಉದಾಹರಣೆಗಳು ನಿಮಗೆ ತಿಳಿದಿದ್ದಲ್ಲಿ, ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಅಭಿಪ್ರಾಯಗಳಿಗೆ ಸದಾ ಸುಸ್ವಾಗತ!

    Leave a Reply

    Your email address will not be published. Required fields are marked *