ವೇಗವಾಗಿ ಓದುವುದು ಹೇಗೆ? ತಂತ್ರಗಳು

Written by: Deepak M

ಓದುವುದು ಮನುಷ್ಯನಿಗೆ ದೇವರು ಕೊಟ್ಟ ವರ ಎಂದೇ ಹೇಳಬಹುದು. ಒಬ್ಬ ವ್ಯಕ್ತಿಯು ತನಗೆ ಗೊತ್ತಿರುವ, ಅಥವಾ ತಿಳಿದ ಜ್ಞಾನವನ್ನು ಬರವಣಿಗೆಗಿಂತ ಮತ್ತೊಂದು ಸಮರ್ಥ ಮಾಧ್ಯಮದಲ್ಲಿ ತಿಳಿಸುವುದು ಅಸಾಧ್ಯ ಎಂಬುದೇ ಬಹುತೇಕರ ಅಭಿಪ್ರಾಯ. ಓದಲು ವಿಶ್ವದಲ್ಲಿ ಕೋಟಿಗಟ್ಟಲೆ ಲೇಖನಗಳು ಮತ್ತು ಪುಸ್ತಕಗಳಿವೆ. ಈ ಲೇಖನವನ್ನು ಓದಿ ಮುಗಿಸುವಷ್ಟರಲ್ಲಿ, ಜಗತ್ತಿನಲ್ಲಿ ಇನ್ನೆಷ್ಟು ಲೇಖನಗಳು, ಪುಸ್ತಕಗಳು ಪ್ರಕಟವಾಗಿರುತ್ತವೆಯೋ ಯಾರಿಗೆ ಗೊತ್ತು?

ಅದಕ್ಕಾಗಿಯೇ ವೇಗವಾಗಿ ಓದುವುದನ್ನು ರೂಢಿಸಿಕೊಂಡರೆ ನೀವು ನಿಮಗೆ ಲಭ್ಯವಿರುವ ಅವಧಿಯಲ್ಲಿಯೇ ಹಲವಾರು ಪುಸ್ತಕಗಳನ್ನು ಓದಿ ಅದರ ಜ್ಞಾನವನ್ನು ಪಡೆಯಬಹುದು. ಇದನ್ನು ಏಕೆ ಹೇಳುತ್ತಿದ್ದೇವೆಯೆಂದರೆ, ವೇಗವಾಗಿ ಓದಿ ಹೆಚ್ಚು ಅಂಕಗಳಿಸಿ ಎಂದಷ್ಟೇ ಅಲ್ಲ. ನಮ್ಮ ತಲೆಮಾರಿಗೆ ಈಗಾಗಲೇ ಕೃತಕ ಬುದ್ಧಿಮತ್ತೆಯ (ಅರ್ಟಿಫಿಶಿಯಲ್ ಇಂಟೆಲಿಜೆನ್ಸ್) ಯಂತ್ರಗಳು ಮನುಷ್ಯರ ಕೆಲಸಗಳನ್ನು ಮಾಡುತ್ತಾ ಇವೆ. ಇನ್ನು ನಮ್ಮ ಮುಂದಿನ ತಲೆಮಾರಿನವರು ಈ ಕೃತಕ ಬುದ್ಧಿಮತ್ತೆಯ ಯಂತ್ರಗಳ ಜೊತೆಗೆ ಪೈಪೋಟಿಗೆ ಇಳಿಯಬೇಕಾಗುತ್ತದೆ. ಆ ಯಂತ್ರಗಳು ನಮಗಿಂತ ಬುದ್ಧಿವಂತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನೀವು ಹೆಚ್ಚು ಹೆಚ್ಚು ಓದಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಿದರೆ, ಖಂಡಿತ ನಿಮ್ಮ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿಕೊಂಡು ಅವುಗಳನ್ನು ಸೋಲಿಸಬಹುದು. ಬನ್ನಿ ಇನ್ನು ತಡ ಮಾಡದೆ ವೇಗವಾಗಿ ಓದುವುದು ಹೇಗೆ ಎಂಬುದನ್ನು ಕಲಿತುಕೊಳ್ಳೋಣ:

 ಇದನ್ನು ಆರಂಭಿಸುವ ಮೊದಲು ನೀವು ಸಾಮಾನ್ಯಾವಾಗಿ ಹೇಗೆ ಓದುತ್ತೀರೋ, ಹಾಗೆ ಒಂದೆರಡು ನಿಮಿಷಗಳ ಕಾಲ ಓದಿ. ಎಷ್ಟು ಪುಟ ಅಥವಾ ಪದಗಳನ್ನು ಓದಿದಿರಿ ಈ ಸಮಯದಲ್ಲಿ ಎಂದು ಒಂದು ಕಡೆ ಗುರುತು ಮಾಡಿಕೊಳ್ಳಿ. ಈಗ ಆರಂಭಿಸೋಣ…..

* ಮೊದಲು ಓದುವಾಗ ನಿಮ್ಮ ಕಣ್ಣುಗಳು ಮಾತ್ರ ಪದಗಳನ್ನು ಓದಲಿ. ತುಟಿ ಅಥವಾ ಬಾಯಲ್ಲಿ ಅದನ್ನು ಉಚ್ಛಾರಣೆ ಮಾಡಲು ಹೋಗಬೇಡಿ. ಓದುವುದು ಎಂದರೆ ಗ್ರಹಿಸುವುದು, ಆದರೆ ಬಹುತೇಕ ಜನರು ಅದರಲ್ಲಿರುವ ಪದಗಳನ್ನು ಮಂತ್ರಗಳಂತೆ ಪಠಣ ಮಾಡುತ್ತಾರೆ. ಇದರಿಂದ ವೇಗ ಕುಗ್ಗುತ್ತದೆ.

* ಓದಲು ಮಾರ್ಗದರ್ಶನ ನೀಡಲು ಪೆನ್ಸಿಲ್ ಅಥವಾ ಪೆನ್ ಇಲ್ಲವೇ ನಿಮ್ಮ ಬೆರಳನ್ನು ಬಳಸಿ. ನಿಮ್ಮ ಮಾರ್ಗದರ್ಶಕ ಸಾಧನವನ್ನು ನೀವು ಓದುವುದಕ್ಕಿಂತ ಸ್ವಲ್ಪ ವೇಗವಾಗಿ ಸಾಗಲು ಅನುವು ಮಾಡಿಕೊಡಿ, ಇದರಿಂದ ನಿಮ್ಮ ವೇಗ ಹೆಚ್ಚುತ್ತದೆ. 

* ಪ್ರತಿದಿನ ಓದಿ, ಎಷ್ಟು ಸಮಯ ಓದಿದಿರಿ ಮತ್ತು ಎಷ್ಟು ಪುಟ ಓದಿದಿರಿ ಎಂದು ಗುರುತು ಮಾಡಿಕೊಳ್ಳಿ.

* ಪದ-ಪದ ಅರ್ಥ ಮಾಡಿಕೊಳ್ಳುವುದಕ್ಕಿಂತ ಇಡೀ ಪ್ಯಾರಾವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಬೇಕಾದರೆ ಒಂದು ನಿಮಿಷ ಯಾವುದಾದರೂ ಲೇಖನವನ್ನು ವೇಗವಾಗಿ ಓದಿ, ಅದರಲ್ಲಿರುವ ವಿಷಯವನ್ನು ಯಾರಿಗಾದರೂ, ಇಲ್ಲವೇ ನಿಮಗೆ ನೀವೇ ವಿವರಿಸಿ. ಆಗ ನೋಡಿ, ನೀವು ಖಂಡಿತವಾಗಿ ಏನು ಓದಿದಿರೋ ಅದನ್ನು ವಿವರಿಸುವಿರಿ.

* ಪುಸ್ಕಕ ಸಂಪೂರ್ಣವಾಗಿ ನಿಮ್ಮ ದೃಷ್ಟಿಗೆ ಬೀಳುವ ಹಾಗೆ ಇಟ್ಟುಕೊಂಡು ಓದಿ, ತುಂಬಾ ಹತ್ತಿರ ಅಥವಾ ದೂರ ಇಟ್ಟುಕೊಂಡು ಓದಬೇಡಿ. 

* ಮೇಜಿನ ಮುಂದೆ ಇಲ್ಲವೇ ಸರಿಯಾದ ಜಾಗದಲ್ಲಿ ಕುಳಿತು ಓದಿ, ನಿಮ್ಮ ಪಾದಗಳು ನೆಲಕ್ಕೆ ಸೋಕಿರಬೇಕು. ಬೆಳಕು ಸರಿಯಾಗಿ ನಿಮ್ಮ ಅಕ್ಕ-ಪಕ್ಕದಿಂದ ಪುಸ್ತಕದ ಮೇಲೆ ಬೀಳುವಂತಿರಬೇಕು.

* ಅನಾವಶ್ಯಕ ಪದಗಳನ್ನು, ಪದೇ ಪದೇ ಪುನರಾವರ್ತನೆಯಾಗುವ ಪದಗಳನ್ನು ಓದಲು ಹೋಗಬೇಡಿ. ಉದಾ: ಏಕೆಂದರೆ, ಅಥವಾ, ಮತ್ತು, ಹಾಗೂ, ಇತ್ಯಾದಿ!!!!

* ಓದುವ ಮೊದಲು, ಲೇಖನ ಇಲ್ಲವೇ ಪಾಠದ ಶೀರ್ಷಿಕೆಯನ್ನು ಓದಿ ಅರ್ಥ ಮಾಡಿಕೊಂಡು ಮುಂದುವರಿಯಿರಿ. ಮಧ್ಯೆ ಮಧ್ಯೆ ಬರುವ ಉಪ ಶೀರ್ಷಿಕೆಗಳು ಮತ್ತು ಚಿತ್ರಗಳು ನಿಮಗೆ ವಿಷಯ ಗ್ರಹಿಸಲು ನೆರವಾಗುತ್ತವೆ ಎಂಬುದನ್ನು ಮರೆಯಬೇಡಿ.

* ನಿಮಗೆ ಗೊತ್ತಿರುವ ವಿಷಯವನ್ನು ಓದಿ ಸಮಯ ವರ್ಥ್ಯ ಮಾಡಬೇಡಿ. ಉದಾಹರಣೆಗೆ, “ಭಾರತಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆಯಿತು” ಎಂಬ ಸಾಲು ನಿಮ್ಮ ಕಣ್ಣಿಗೆ ಬಿದ್ದರೆ ಅದು ನಿಮಗೆ ಈಗಾಗಲೇ ಗೊತ್ತಿರುವ ವಿಷಯವಾಗಿರುವುದರಿಂದಾಗಿ ಅದನ್ನು ತ್ಯಜಿಸಬಹುದು ಎಂಬ ಸಲಹೆಯನ್ನು ವಿಶ್ವದ ಅತ್ಯಂತ ವೇಗದ ಓದುಗ ಎಂಬ ಕೀರ್ತಿಗೆ ಭಾಜನವಾಗಿರುವ “ಹೊವಾರ್ಡ್ ಬರ್ಗ್” ಹೇಳುತ್ತಾರೆ. ಅಂದ ಹಾಗೆ ಈ ಪುಣ್ಯಾತ್ಮ 2018 ನವೆಂಬರ್‌ಗೆ 30,000  ಪುಸ್ತಕಗಳನ್ನು ಓದಿ ಮುಗಿಸಿದ್ದರು. ಇಂದು ಅದು ಎಲ್ಲಿಗೆ ತಲುಪಿರುತ್ತದೆಯೋ??????

* ಹೊವಾರ್ಡ್ ಬರ್ಗ್ ಆಗ ತಾನೇ ಬಿಡುಗಡೆಯಾದ 300 ಪುಟಗಳ ಒಂದು ಪುಸ್ತಕವನ್ನು 4 ಗಂಟೆ 43 ನಿಮಿಷದಲ್ಲಿ ಓದಿ ಮುಗಿಸಿದರು. ಇದನ್ನು ವೀಡಿಯೋ ಸಹ ಮಾಡಲಾಗಿದೆ. ಅಂದ ಹಾಗೆ ಆ ಪುಸ್ತಕ ಸುಮಾರು 300 ಪುಟ ಇತ್ತು.

* ಸಾಮಾನ್ಯವಾಗಿ ನಮ್ಮ ಪುಸ್ತಕಗಳನ್ನು ಹೇಗೆ ಅಚ್ಚು ಹಾಕಲಾಗಿರುತ್ತವೆ ಎಂದರೆ, ಯಾವುದೇ ಪುಟವನ್ನು ಓದಲು ನಿಮಗೆ ಕನಿಷ್ಥ 30 ಸೆಕೆಂಡ್ ಸಾಕು. ಅರ್ಥ ಮಾಡಿಕೊಂಡು ಓದಬೇಕು ಎಂದರೂ ಸಹ ಒಂದು ನಿಮಿಷ ಪ್ರತಿ ಪುಟಕ್ಕೆ ಸಾಕು.

ತಂತ್ರಗಳು

  • ಸಾಮಾನ್ಯ ಓದುವಿಕೆ

ಈ ತಂತ್ರದಲ್ಲಿ ನೀವು ಎಡದಿಂದ ಬಲಕ್ಕೆ ವೇಗವಾಗಿ ಓದಿಕೊಂಡು ಹೋಗುತ್ತೀರಿ.

  • ಯೂ-ಟರ್ನ್ ಓದುವಿಕೆ

ಈ ತಂತ್ರದಲ್ಲಿ ಎಡದಿಂದ ಬಲಕ್ಕೆ ಓದಿಕೊಂಡು ಹೋಗುವ ನೀವು ಸಾಲಿನ ಕೊನೆಯಲ್ಲಿ ಯೂ-ಟರ್ನ್ ತೆಗೆದುಕೊಂಡು ಮುಂದಿನ ಸಾಲನ್ನು ವಿರುದ್ಧ ದಿಕ್ಕಿನಿಂದ (ಪದಗಳನ್ನು ಮಾತ್ರ) ಓದಿಕೊಂಡು ಬರುತ್ತೀರಿ. ಅರೇ ಅರ್ಥವಾಗುತ್ತದೆಯೇ? ಎಂಬುದು ನಿಮ್ಮ ಪ್ರಶ್ನೆಯಾದರೆ, ಖಂಡಿತ! ಎಂಬುದು ನಮ್ಮ ಉತ್ತರ. ಆದರೆ ಇದನ್ನು ಮೊದಲು ನಿಮ್ಮ ನೆಚ್ಚಿನ ದಿನ ಪತ್ರಿಕೆಯಲ್ಲಿ ಪ್ರಯೋಗ ಮಾಡಿ. ಗೊತ್ತಲ್ಲವೇ ದಿನ ಪತ್ರಿಕೆಗಳಲ್ಲಿ ಕಾಲಂನಲ್ಲಿ ಸುದ್ದಿ ಪ್ರಿಂಟಾಗಿರುತ್ತದೆ. ಒಂದು ಸಾಲಿನಲ್ಲಿ ನಾಲ್ಕರಿಂದ ಐದು ಪದಗಳು ಇರಬಹುದು ಅಷ್ಟೇ. ಸುದ್ದಿ ನಿಮಗೆ ಅರ್ಥವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಮನಸ್ಸಿಗೆ ತಿಳಿ ಹೇಳಿ ಸಾಧ್ಯ ಎಂದು!

  • ಪ್ಯಾರಲೆಲ್ ಓದುವಿಕೆ

ಈ ತಂತ್ರದಲ್ಲಿ ನೀವು ಒಂದು ಸಾಲನ್ನು ಒಟ್ಟಿಗೆ ಗ್ರಹಿಸಲು ಪ್ರಯತ್ನಿಸುವಿರಿ. ಯಾವುದಾದರೂ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಮೇಲಿನಿಂದ ಕೆಳಕ್ಕೆ ನೋಡಿಕೊಂಡು ಹೋಗುವಿರಲ್ಲವೇ? ಅದೇ ರೀತಿ ಇಡೀ ಸಾಲನ್ನು ಒಮ್ಮೆಗೆ ಗ್ರಹಿಸಲು ಪ್ರಯತ್ನಿಸಿ. ಇದನ್ನು ನೀವು ಬರೆದುಕೊಂಡಿರುವ ಅಥವಾ ಈಗಾಗಲೇ ಒಮ್ಮೆ ಓದಿರುವ ಪುಸ್ತಕದ ಮೇಲೆ ಮೊದಲು ಪ್ರಯೋಗಿಸಿ. 

  • ಉಲ್ಟಾ ಓದು

ನೀವು ಪುನರಾವರ್ತನೆ ಮಾಡುವಾಗ ಪುಸ್ತಕವನ್ನು ಸಾಮಾನ್ಯವಾಗಿ ಹಿಡಿದುಕೊಳ್ಳದೆ ತಲೆ ಕೆಳಗಾಗಿ ಹಿಡಿದುಕೊಂಡು ಓದಿ. ಹೀಗೆ ಓದುವಾಗ ಸಾಲನ್ನು ಉಲ್ಟಾ ಓದಲು ಆರಂಭಿಸಿ. ಮೊದ ಮೊದಲು ಇದನ್ನು ಸಣ್ಣ ಪ್ಯಾರಾಗಳ ಮೇಲೆ ಪ್ರಯೋಗಿಸಿ, ಆ ನಂತರ ಪುಟಗಳನ್ನು ಓದಬಹುದು. ಹೀಗೆ ಮಾಡುವುದರಿಂದ ನೀವು ಓದಿದ್ದು, ನಿಮ್ಮ ಸುಪ್ತ ಮನಸ್ಸಿನಲ್ಲಿ (ಸಬ್ ಕಾನ್ಶಿಯಸ್ ಮೆಮೊರಿ) ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.

ಕೊನೆಯ ಮಾತು: ವಿವೇಕಾನಂದ, ಓಶೋ, ಹೊವರ್ಡ್, ಕೆನಡಿ, ಮುಂತಾದವರು ದಿನಕ್ಕೆ ಎರಡು ಸಾವಿರ ಪುಟಗಳನ್ನು ಓದುತ್ತಿದ್ದಾರಂತೆ. ನೀವು ಈ ಮೇಲಿನ ತಂತ್ರಗಳನ್ನು ಅಳವಡಿಸಿಕೊಂಡರೇ ಕನಿಷ್ಠ ವಾರಕ್ಕೆ ಎರಡು ಪುಸ್ತಕ ಓದಬಹುದು. ವರ್ಷಕ್ಕೆ ಕನಿಷ್ಠ ನೂರು ಪುಸ್ತಕ ಓದಬಹುದು. ಓದುವಿರಲ್ಲವೇ? ಓದಿ, ಓದಲು ಪ್ರೇರೇಪಿಸಿ. ಹಾಗೆಯೇ ಈ ಲೇಖನವನ್ನು ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಹಂಚಿಕೊಳ್ಳಲು ಮರೆಯಬೇಡಿ.

    Leave a Reply

    Your email address will not be published. Required fields are marked *