ಸಂಕ್ಷಿಪ್ತ ಕರ್ನಾಟಕ ಇತಿಹಾಸ: ಕರ ಮುಗಿದು ಕೇಳಿ, ಈ ರಾಜ್ಯದ ಭವ್ಯ ಇತಿಹಾಸವನ್ನು

ಕರ್ನಾಟಕ ಎಂದರೆ ಐಟಿ-ಬಿಟಿ ಎಂದೇ ಹಲವರಿಗೆ ಗೊತ್ತು, ಇನ್ನೂ ಕೆಲವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಎಂದು ನೆನಪಾಗಬಹುದು, ಇನ್ನುಳಿದವರಿಗೆ ಕಲೆ, ಶಿಲೆ ಇತ್ಯಾದಿ ನೆನಪಿಗೆ ಬರಬಹುದು. ಅಸಲಿಗೆ ಕರ್ನಾಟಕದ ಭವ್ಯ ಇತಿಹಾಸದ ಒಂದು ಪಕ್ಷಿನೋಟವನ್ನು ನೋಡೋಣ ಬನ್ನಿ.

ಕರ್ನಾಟಕ ಎಂದರೆ ಭಾರತದ ದೇಶದ ಸಿಲಿಕಾನ್ ಸಿಟಿಯನ್ನು ರಾಜಧಾನಿಯನ್ನಾಗಿ ಹೊಂದಿರುವ ರಾಜ್ಯ ಎಂದು ಈಗ ಬಹುತೇಕ ಹೊರ ಜಗತ್ತಿಗೆ ಪರಿಚಯವಾಗಿದೆ. ಐಟಿ ಮತ್ತು ಬಿಟಿ ಸಿಟಿ ಎಂದೇ ಕರೆಯಲ್ಪಡುವ ಬೆಂಗಳೂರಿನಿಂದ ಕರ್ನಾಟಕವನ್ನು ಗುರುತಿಸುವ ಈ ಕಾಲದಲ್ಲಿ ಕರ್ನಾಟಕ ಎಂದು ಅಖಂಡವಾಗಿ ಗುರುತಿಸುವಂತಹ ಕಾಲ ಸಹ ಇತ್ತು.

ಕರ್ನಾಟಕದ ಇತಿಹಾಸದ ಅತ್ಯಂತ ಹಳೆಯ ಸಾಕ್ಷಿ ನಮಗೆ ಮಹಾಭಾರತದಲ್ಲಿ ದೊರೆಯುತ್ತದೆ. ಸಭಾಪರ್ವದಲ್ಲಿ ಕರ್ಣಾಟಾಃ, ಭೀಷ್ಮಪರ್ವದಲ್ಲಿ ಕರ್ಣಾಟಿಕಾಃ ಎಂದೂ ನಮ್ಮ ನಾಡನ್ನು ಕರೆಯಲಾಗಿದೆ. ವಿರಾಟನ ರಾಜ್ಯದ ಭಾಗವಾಗಿದ್ದ ಕರ್ನಾಟಕವು, ಮಹಾಭಾರತ ಯುದ್ಧಕ್ಕೆ ಮೊದಲಿನ ಸಿದ್ಧತಾ ಯುದ್ಧಕ್ಕೆ ಸಾಕ್ಷಿಯಾಗಿತ್ತು.

ಕ್ರಿ.ಪೂ ಕಾಲದಲ್ಲಿಯೇ ಗ್ರೀಕರ ಜೊತೆಗೆ ವ್ಯಾಪಾರ ವ್ಯವಹಾರ ಸಂಬಂಧ ಹೊಂದಿದ್ದ ನಾಡು ಇದಾಗಿತ್ತು. “ಹರಪ್ಪ” ನಾಗರೀಕತೆ ಎಂದೇ ಖ್ಯಾತವಾಗಿರುವ ನಾಗರೀಕತೆ ಯಾರಿಗೇ ತಾನೇ ಗೊತ್ತಿಲ್ಲ. ಹೆಮ್ಮೆಯ ವಿಚಾರವೇನೆಂದರೆ, ’ಹರಪ್ಪ’ ಎಂಬ ಪದವೇ ಕನ್ನಡದ್ದು ಎಂಬುದು. ಈ ನಾಗರೀಕತೆಯಲ್ಲಿ ದೊರೆತ ಚಿನ್ನದ ಆಭರಣಗಳ ಮೂಲ ಕರ್ನಾಟಕ ರಾಜ್ಯವೆಂಬುದು ನಮ್ಮ ಇತಿಹಾಸವನ್ನು ಸಾರಿ ಹೇಳುತ್ತವೆ.

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ಕಾಲದಲ್ಲಿ ಜೈನ ಧರ್ಮವನ್ನು ಸ್ವೀಕರಿಸಿ ಮುಕ್ತಿ ಪಡೆಯಲು ಬಂದು ನೆಲೆಸಿದ್ದು ಕರ್ನಾಟಕದ ಶ್ರವಣ ಬೆಳಗೊಳದಲ್ಲಿ. ಅದಕ್ಕಾಗಿ ಆತ ನೆಲೆಸಿದ ಬೆಟ್ಟವನ್ನು ಚಂದ್ರಗಿರಿ ಎಂದೇ ಗುರುತಿಸುತ್ತಾರೆ.

ಇಂದು 30 ಜಿಲ್ಲೆಗಳಿಂದ ಕೂಡಿರುವ ರಾಜ್ಯವು ಒಂದಾನೊಂದು ಕಾಲದಲ್ಲಿ ಅಂದರೆ, ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ನರ್ಮದಾ ನದಿಯ ತೀರದವರೆಗೆ ಹಬ್ಬಿತ್ತು. ಚಾಳುಕ್ಯರ ಕಾಲದಲ್ಲಿ ನಮ್ಮ ಕನ್ನಡದ ರಾಜರು ನೇಪಾಳದ ಕಠ್ಮಂಡುವಿನವರೆಗೆ ಕರ್ನಾಟಕವನ್ನು ವಿಸ್ತರಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಇದಕೆ ನೇಪಾಳದಲ್ಲಿ ದೊರೆತ ಎರಡು ಕನ್ನಡದ ಶಾಸನಗಳೇ ಸಾಕ್ಷಿ. ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕವು ಮಧುರೈವರೆಗೆ ದಕ್ಷಿಣದಲ್ಲಿ ಪೂರ್ವದಲ್ಲಿ ಮಹಾರಾಷ್ಟ್ರದವರೆಗೆ ಹಬ್ಬಿತ್ತು. ಬ್ರಿಟೀಷರ ಕಾಲದಲ್ಲಿ ಸಹ ಅರ್ಧ ಮಹಾರಾಷ್ಟ್ರ ಭಾಗವನ್ನು ಕರ್ನಾಟಕದೊಂದಿಗೆ ಗುರುತಿಸಲಾಗುತ್ತಿತ್ತು.

ಈಗ ತಮಿಳುನಾಡು ರಾಜ್ಯದಲ್ಲರುವ ಈರೋಡ್, ಕೃಷ್ಣಗಿರಿ, ಧರ್ಮಪುರಿ ಹಾಗೂ ಸೇಲಂ ಜಿಲ್ಲೆಗಳು ಐತಿಹಾಸಿಕವಾಗಿ ಅಚ್ಚ ಕನ್ನಡ ಪ್ರದೇಶಗಳಾಗಿದ್ದವು. ಕನ್ನಡದ ರಾಜಮನೆತನಗಳಾದ ತಲಕಾಡಿನ ಗಂಗರು ಹಾಗೂ ಬಾಣರಸರು ಈ ಪ್ರದೇಶಗಳನ್ನು ಆಳಿದ್ದರು. ಈ ಜಿಲ್ಲೆಗಳಲ್ಲಿ ದೊರಕಿರುವ ಹೆಚ್ಚಿನ ಶಾಸನಗಳು ತಲಕಾಡಿನ ಗಂಗರಸರ ಕನ್ನಡ ಶಾಸನಗಳು ಎಂಬುದು ವಿಶೇಷ. ಈ ಭಾಗದ ಹಳ್ಳಿಗಳು, ಪಟ್ಟಣಗಳು ಈಗಲೂ ಕನ್ನಡದ ಹೆಸರನ್ನು ಹೊಂದಿವೆ. ಉದಾಹರಣೆಗೆ ಬೆಂಗಳೂರು ಗಡಿಗೆ ಹೊಂದಿಕೊಂಡಿರುವ ಹೊಸೂರು, ಡೆಂಕಣಿಕೋಟೆ ಊರುಗಳ ಹೆಸರು ಕನ್ನಡದಲ್ಲಿವೆ. ಗಂಗರ ನಂತರ ಈ ಪ್ರದೇಶಗಳು ಸ್ವಲ ಸಮಯ ಚೋಳರ ಆಳ್ವಿಕೆಯಲ್ಲಿತ್ತು. ಚೋಳರನ್ನು ಸೋಲಿಸಿ ಹೊಯ್ಸಳರು ಈ ಪ್ರದೇಶವನ್ನು ಆಳಿದರು. ಟಿಪ್ಪುವಿನ ಆಳ್ವಿಕೆಗೂ ಈ ಪ್ರದೇಶಗಳು ಒಳಪಟ್ಟಿತ್ತು. ಟಿಪ್ಪುವಿನ ಪತನಾನಂತರ ಮೈಸೂರಿನ ಆರಸರಿಗೂ ಬ್ರಿಟೀಷರಿಗೂ ಒಪ್ಪಂದವಾಗಿ ಈ ಅಚ್ಚಗನ್ನಡ ಪ್ರದೇಶಗಳು ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿ ನಂತರ ರಾಜ್ಯಗಳ ಪುನರ್ವಿಂಗಡಣೆಯ ಸಮಯದಲ್ಲಿ ತಮಿಳುನಾಡಿನಲ್ಲೇ ಉಳಿಯಿತು. ಆದರೆ ಮದ್ರಾಸ್‌ ಪ್ರಾಂತ್ಯದಲ್ಲಿದ್ದ ಕೊಳ್ಳೇಗಾಲ ತಾಲ್ಲೂಕು ಮಾತ್ರ ಕರ್ನಾಟಕದಲ್ಲಿ ಸೇರ್ಪಡೆಯಾಯಿತು. ಇನ್ನು ಪ್ರಸಿದ್ಧ ಗಿರಿಧಾಮವಾದ ನೀಲಗಿರಿ ಅಥವಾ ಉದಕಮಂಡಲ(ಊಟಿ)ದಲ್ಲಿರುವ ಅತ್ಯುನ್ನತ ಶಿಖರದ ಹೆಸರು ದೊಡ್ಡ ಬೆಟ್ಟ! ಇಲ್ಲಿನ ಹಳ್ಳಿಗಳಲ್ಲಿ ವಾಸಿಸುವ ಬಡಗರು ಕನ್ನಡಿಗರು. ಅವರು ಮಾತನಾಡುವ ಬಡಗ, ಕನ್ನಡದ ಒಂದು ಉಪಭಾಷೆ. ಐತಿಹಾಸಿಕವಾಗಿ ನೀಲಗಿರಿ ಮೈಸೂರು ಒಡೆಯರ ಆಡಳಿತದಲ್ಲಿತ್ತು. ನಂತರ ಇದು ಟಿಪ್ಪುವಿನ ವಶಕ್ಕೆ ಬಂತು. ಟಿಪ್ಪುವಿನ ಪತನಾನಂತರ ಇದು ಮದ್ರಾಸಿನ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಏಕೀಕರಣದ ಸಮಯದಲ್ಲಿನ ನಮ್ಮ ರಾಜಕೀಯ ನಾಯಕರ ನಿರ್ಲಕ್ಷ್ಯದಿಂದ ನಾವು ನೀಲಗಿರಿಯನ್ನೂ ಕಳೆದುಕೊಂಡಿದ್ದೇವೆ. ಚಾಮರಾಜನಗರದ ಗಡಿಗೆ ಹೊಂದಿಕೊಂಡಂತಿರುವ ಈರೋಡಿನ ಸತ್ಯಮಂಗಲ, ತಾಳವಾಡಿ ಪ್ರದೇಶದಲ್ಲಿ ಈಗಲೂ ಕನ್ನಡಿಗರಿದ್ದಾರೆ. ಪಂಡರಾಪುರದ ವಿಠಲ, ಕರವೀರಪುರ(ಕೊಲ್ಹಾಪುರ)ದ ಮಹಾಲಕ್ಷ್ಮಿ ಹಾಗೂ ತುಳಜಾ ಭವಾನಿ ಕನ್ನಡಿಗರ ಅರಾಧ್ಯ ದೇವರುಗಳು. ಇನ್ನೂ ಸ್ವಾರಸ್ಯಕರ ವಿಷಯವೆಂದರೆ ಉತ್ತರ ಮಹಾರಾಷ್ಟ್ರದ ನಾಸಿಕ್‌, ಔರಂಗಾಬಾದ್‌, ಮುಂಬೈ ಪ್ರದೇಶಗಳಲ್ಲೂ ಕನ್ನಡಿಗರು ನೆಲೆಸಿದ್ದರೆಂದು ಡಾ।।ಚಿದಾನಂದ ಮೂರ್ತಿಗಳು ತಮ್ಮ ಸಂಶೋಧನಾ ಗ್ರಂಥ ‘ಭಾಷಿಕ ಬೃಹತ್‌ ಕರ್ನಾಟಕದಲ್ಲಿ’ ನಿರೂಪಿಸಿದ್ದಾರೆ. 1670ರಲ್ಲಿ ಮುಂಬೈನಲ್ಲಿ ಆಂಗ್ಲ ಭಾಷೆಯ ಕಾನೂನುಗಳನ್ನು ಎರಡು ಭಾಷೆಗಳಿಗೆ ಅನುವಾದಿಸಿದ್ದರಂತೆ. ಒಂದು ಪೋರ್ಚುಗೀಸ್‌ ಮತ್ತೊಂದು ಕ್ಯಾನರೀಸ್‌(ಕನ್ನಡ)! ಅಂದರೆ ಮುಂಬೈ ನಗರದ ಮೂಲನಿವಾಸಿಗಳು ಕನ್ನಡದವರು ಎಂದು ತಿಳಿಯಿತಲ್ಲವೇ? ಈಗಿನ ಮುಂಬೈನ ಬಡಾವಣೆಗಳಾದ ಡೋಂಬಿವಿಲಿ, ಬೋರಿವಿಲಿಗಳು ಹಿಂದೆ ಕನ್ನಡದ ಡೋಂಬಿವಳ್ಳಿ, ಬೋರಿವಳ್ಳಿಗಳಾಗಿದ್ದವು. ಇಲ್ಲಿನ ಚೆಂಬೂರ್‌ನಲ್ಲಿರುವ ಕನ್ನಡದ ಊರ್‌ ಪದವನ್ನು ನಾವು ಗಮನಿಸಬಹುದು. ಹೀಗೇ ಮಹಾರಾಷ್ಟ್ರದಾದ್ಯಂತ ಇರುವ ಕನ್ನಡ ಮೂಲದ ಸ್ಥಳನಾಮಗಳ ಆಧಾರದಿಂದ ಹಾಗೂ ಈಗಲೂ ಅಲ್ಲಿ ನೆಲೆಸಿರುವ ಅಲ್ಲಿನ ಮೂಲ ನಿವಾಸಿಗಳ ಹೆಸರು ಮತ್ತು ಭಾಷೆಗಳಲ್ಲಿ ಕನ್ನಡದ ಸಾಮ್ಯತೆ ಇದೆಯೆಂದು ಡಾ|| ಚಿದಾನಂದ ಮೂರ್ತಿಗಳು ತಿಳಿಸಿದ್ದಾರೆ


ಹಳಗನ್ನಡ ಕವಿಗಳು ಕಂಡ ಕರ್ನಾಟಕ

ಕರ್ನಾಟಕ ಎಂದರೆ ಐಟಿ-ಬಿಟಿ ಎಂದೇ ಹಲವರಿಗೆ ಗೊತ್ತು, ಇನ್ನೂ ಕೆಲವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಎಂದು ನೆನಪಾಗಬಹುದು, ಇನ್ನುಳಿದವರಿಗೆ ಕಲೆ, ಶಿಲೆ ಇತ್ಯಾದಿ ನೆನಪಿಗೆ ಬರಬಹುದು. ಆದರೆ ಹಳಗನ್ನಡದ ಕವಿಗಳು ಕಂಡ ಕರ್ನಾಟಕ ಹೇಗಿತ್ತು ಎಂದು ಅವರ ಸಾಲುಗಳಲ್ಲಿಯೇ ಓದೋಣ ಬನ್ನಿ:

ಕಾವೇರಿಯಿಂದಮಾ ಗೋ

ದಾವರಿವರಮಿರ್ದ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ…

ಅದರೊಳಗಂ ಕಿಸುವೊಳಲಾ,

ವಿದಿತಮಹಾಕೊಪಣನಗರದಾ, ಪುಲಿಗೆರೆಯಾ,

ಸದಭಿಸ್ತು ತಮಪ್ಪೊಂಕುಂ

ದದ, ನಡುವಣ ನಾಡೆ, ನಾಡೆ ಕನ್ನಡದ ತಿರುಳ್.

ಅಂದರೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿರುವುದು ಕನ್ನಡ ನಾಡು; ಅದರಲ್ಲಿಯೂ ಕಿಸುವೊಳಲು, ಕೋಪಣ, ಪುಲಿಗೆರೆ, ಒಂಕುಂದ ಈ ಊರುಗಳ ನಡುವೆ ಇರುವ ನಾಡುವ ಕನ್ನಡದ ತಿರುಳು ಕವಿರಾಜಮಾರ್ಗ ಬರೆದ ಕವಿ ತಿಳಿಸಿದ್ದಾನೆ.

ಇದು ಆತ ನೋಡಿದ ಕನ್ನಡ ನಾಡಿನ ಗಡಿಗಳು. ಇನ್ನೂ ಆತನು ನೋಡಿದ ಕನ್ನಡ ನಾಡಿನ ಜನರ ಕುರಿತಾಗಿ ಆತನೇ ಬರೆದಿರುವ ಸಾಲುಗಳನ್ನು ಒಮ್ಮೆ ನೋಡೋಣ ಬನ್ನಿ.

ಪದನರಿದು ನುಡಿಯಲುಂ, ನುಡಿ

ದುದನಾರಯಲುಂ, ಅರ್ಪರಾ ನಾಡವರ್ಗಳ್

ಚದುರರ್ ನಿಜದಿಂ ಕುರಿತೋ

ದದೆಯಂ ಕಾವ್ಯಪ್ರಯೋಗಪರಿಣಮತಿಗಳ್

ಕುರಿತವರಲ್ಲದೆ ಮತ್ತಂ

ಪೆರರುಂ ತಂತಮ್ಮ ನುಡಿಯೊಳೆಲ್ಲಂ ಜಾಣ

ಕಿರುವಕ್ಕಳುಂ ಆ ಮೂಗರು

ಮರಿಪಲ್ಕರಿವರ್ ವಿವೇಕಮಂ ಮಾತುಗಳಂ

ಕನ್ನಡನಾಡಿನವರು ಸೊಗಸಾಗಿ ಮಾತನಾಡಬಲ್ಲವರು, ಆಡಿದ್ದನ್ನು ವಿಮರ್ಶೆ ಮಾಡಬಲ್ಲವರು, ಹುಟ್ಟುತ್ತ ಜಾಣರು, ಅದೇ ಕೆಲಸವಾಗಿ ಓದದಿದ್ದರೂ ಕಾವ್ಯಪ್ರಯೋಗ ಮಾಡಬಲ್ಲವರು ಮತ್ತು ಅರ್ಥ ಮಾಡಿಕೊಳ್ಳಬಲ್ಲವರು, ಮಕ್ಕಳು ಮೂಗರೂ ಸಹ ವಿವೇಕವನ್ನು ಹೇಳಬಲ್ಲವರು, ಕನ್ನಡಿಗರಲ್ಲಿ, ತನ್ನ ಪ್ರಜೆಗಳಲ್ಲಿ ಏನು ಪ್ರೇಮ, ಏನು ಅಭಿಮಾನ ಎಂಬ ಮಾತುಗಳಲ್ಲಿ ನಮ್ಮ ಕನ್ನಡಿಗರನ್ನು ಹಾಡಿ ಹೊಗಳಿದ್ದಾನೆ ಈ ಕವಿ.

ಈ ಮಾತುಗಳು ಕನ್ನಡಿಗರ ಬುದ್ಧಿವಂತಿಕೆ ಮತ್ತು ಸಾಹಿತ್ಯ ಪ್ರಜ್ಞೆಗಳಿಗೆ ಕನ್ನಡಿ ಹಿಡಿಯುತ್ತವೆ.

ಇನ್ನೂ ನಮ್ಮ ಆದಿ ಕವಿ ಪಂಪ ಕರ್ನಾಟಕವನ್ನು ವರ್ಣಿಸುವ ಬಗೆಯನ್ನು ನೀವು ಒಮ್ಮೆ ತಿಳಿಯಬೇಕು.

ಮಿಡಿದೊಡೆ ತನಿಗರ್ಬುರಸಂ

ಬಿಡುವುವು, ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ

ಗಿಡುವುವು ತುಂಬಿಗಳ್, ಅಳ್ಕಿಮೆ

ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್ |

ಅರ್ಥ: ಹದವಾದ ಕಬ್ಬುಗಳನ್ನು ಅರೆದರೆ ರಸ ಬಿಡುತ್ತವೆ. ಅರಳಿದ ಹೂವುಗಳನ್ನು ನೋಡಿದರೆ ಸಾಕು ದುಂಬಿಗಳು ಹಾರಿ ಬರುತ್ತವೆ. ಒಂದು ಒಂದು ಹಣ್ಣು ಸಾಕು, ರಸ ಕುಡಿದು ತಡೆದುಕೊಳ್ಳಲಾಗದೆ ಅಜೀರ್ಣಪಡುತ್ತವೆ ಗಿಳಿಗಳು.

ಸುತ್ತಿರಿದ ರಸದ ತೊರೆಗಳೆ

ಮುತ್ತಿನ ಮಾಣಿಕದ ಪಲವು ಮಾಗರಮೆ, ಮದೋ

ನ್ಮತ್ತ ಮದಕರಿ ವನಂಗಳೆ,

ಸುತ್ತಲುಂ ಆ ನೆಲದ ಸಿರಿಯನೇನಂ ಪೊಗಳ್ವೆಂ

ಅರ್ಥ: ಎತ್ತ ನೋಡಿದರೂ ನದಿ ತೊರೆಗಳು, ಮುತ್ತಿನಂತಹ ಸರೋವರಗಳು, ಮದಿಸಿದ ಮದ್ದಾನೆಗಳು ಓಡಾಡುವ ವನಗಳು, ಆ ನೆಲದಲ್ಲಿದ್ದ ಸಿರಿ ಆ ಸೌಂದರ್ಯವನ್ನು ನಾನು ಏನೆಂದು ಹೊಗಳಲಿ.

ಇಂತಹ ದಿವ್ಯ ಮತ್ತು ಭವ್ಯ ಪರಂಪರೆಯನ್ನು ಹೊಂದಿರುವ ಈ ನಾಡಿನಲ್ಲಿ ಜನಿಸಿದ ನಾವು, ಈ ರಾಜ್ಯ ಘನ ಪರಂಪರೆಯನ್ನು ಅರಿತು ಅದನ್ನು ಮುಂದಿನ ಪೀಳಿಗೆಗೆ ಕಾಪಾಡಿ ಹೋಗಬೇಕೆಂಬುದನ್ನು ಮರೆಯಬಾರದು.

ಆಧಾರ: ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ: ಕಾವ್ಯಾಲಯ ಪ್ರಕಾಶಕರು; ಮೈಸೂರು (ಬಿ.ಎಂ.ಶ್ರೀ ಕಂಠಯ್ಯನವರ ಭಾಷಣ, ಪೀಠಿಕೆಗಳು ಮತ್ತು ಲೇಖನಗಳ ಸಂಗ್ರಹ)

ಭಾಷಿಕ ಬೃಹತ್‌ಕರ್ನಾಟಕ’ಮತ್ತು ಇತರ ಕನ್ನಡ ಐತಿಹಾಸಿಕ ಪುಸ್ತಕಗಳು, ಲೇ: ಚಿದಾನಂದ ಮೂರ್ತಿ, ಸಪ್ನ ಬುಕ್ ಹೌಸ್.

    Leave a Reply

    Your email address will not be published. Required fields are marked *